ಕೊಲ್ಲಂ: ಅಪಹರಣಕ್ಕೊಳಗಾಗಿ ಕಳವಳಕ್ಕೆ ಕಾರಣವಾಗಿದ್ದ 6ರ ಹರೆಯದ ಮಗು ಸುರಕ್ಷಿತವಾಗಿ ಮರಳಿ ಬಂದಿರುವುದು ಸಂತಸ ತಂದಿದೆ ಎಂದು ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ತಿಳಿಸಿದ್ದಾರೆ. ಸ್ಥಳೀಯರು, ಮಾಧ್ಯಮ ಕಾರ್ಯಕರ್ತರು ಮತ್ತು ಎಲ್ಲಾ ಪೋಲೀಸ್ ಅಧಿಕಾರಿಗಳು ಮಗುವನ್ನು ಮರಳಿ ಪಡೆಯಲು ಅವಿರತ ಶ್ರಮಿಸಿದ್ದರು.
ಪೋಲೀಸರು ಎಲ್ಲ ಕಡೆ ತಪಾಸಣೆಯನ್ನು ತೀವ್ರಗೊಳಿಸಿದ್ದರು. ಎಲ್ಲಾ ಗಡಿಗಳಲ್ಲಿ ನಿಗಾ ಇರಿಸಲಾಗಿತ್ತು. ಕೊಲ್ಲಂ ಮತ್ತು ತಿರುವನಂತಪುರಂನಿಂದ ಮಗುವನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಪೋಲೀಸರಿಗೆ ಖಚಿತವಾಗಿತ್ತು. ಅಪಹರಣಕಾರರು ಮಗುವನ್ನು ಸುರಕ್ಷಿತವಾಗಿ ಬಿಟ್ಟು ತೆರಳಲು ಎಲ್ಲರ ಒತ್ತಡವೇ ಕಾರಣ ಎಂದೂ ಅವರು ಹೇಳಿದ್ದಾರೆ.
ಮಗು ಆಘಾತದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಮಗು ವೈದ್ಯರ ನಿಗಾದಲ್ಲಿದೆ. ಕಾರಿನಲ್ಲಿ ಅಳಲು ಯತ್ನಿಸಿದಾಗ ಮಗುವನ್ನು ಹಿಂಬದಿಯ ಸೀಟಿನಲ್ಲಿ ಕೂರಿಸಿ ಬಾಯಿ ಮುಚ್ಚಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬಳಿಕ ಮಗುವನ್ನು ಮನೆಗೆ ಕರೆತಂದು ಆಹಾರ ನೀಡಿ ಲ್ಯಾಪ್ ಟಾಪ್ ನಲ್ಲಿ ಕಾರ್ಟೂನ್ ತೋರಿಸಿದ್ದಾರೆ. ರಾತ್ರಿ ಮಲಗಿದ್ದರು ಎಂಬುದು ಮಗುವಿನಿಂದ ಬಂದಿರುವ ಮಾಹಿತಿ.
ಅಪಹರಣಕಾರರು ಮಗುವಿಗೆ ಪರಿಚಿತರಲ್ಲ. ಪೂರ್ಣ ಆರೋಗ್ಯದ ಚೇತರಿಕೆಯ ನಂತರ ಮಗುವಿನಿಂದ ಹೆಚ್ಚಿನ ಮಾಹಿತಿಯನ್ನು ಕೇಳಬಹುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಶೀಘ್ರವೇ ಸಿಕ್ಕಿಬೀಳುವುದು ಖಚಿತ. ತನಿಖೆ ಪ್ರಾಥಮಿಕ ಹಂತದಲ್ಲಿದೆ. ಮಗುವನ್ನು ರಕ್ಷಿಸುವುದು ಮೊದಲ ಕಾರ್ಯವಾಗಿತ್ತು. ಆರೋಪಿಗಳ ಬಗ್ಗೆ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದೂ ಎಂ.ಆರ್.ಅಜಿತ್ ಕುಮಾರ್ ಹೇಳಿದ್ದಾರೆ.