ಉತ್ತರಕಾಶಿ: ಉತ್ತರಾಖಂಡದ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊರೆಯಲಾಗಿರುವ ಸುರಂಗ ಕುಸಿದು ಒಳಗೆ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿದೆ.
ರಕ್ಷಣಾ ಕಾರ್ಯಾಚರಣೆಗೆ ಅಂತರರಾಷ್ಟ್ರೀಯ ಸುರಂಗ ತಜ್ಞರನ್ನು ಕರೆಸಲಾಗಿದೆ. ಇಂಟರ್‌ನ್ಯಾಶನಲ್ ಟನೆಲಿಂಗ್ ಅಂಡರ್‌ಗ್ರೌಂಡ್ ಸ್ಪೇಸ್ ಪ್ರೊಫೆಸರ್ ಆರ್ನಾಲ್ಡ್ ಡಿಕ್ಸ್ ಸಿಲ್ಕ್ಯಾರಾ ಸುರಂಗದ ಬಳಿಗೆ ಆಗಮಿಸಿದ್ದು, ಸಂತ್ರಸ್ತರನ್ನು ಹೊರತರಲು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಕಾರ್ಯಾಚರಣೆಗಾಗಿ ದೊಡ್ಡ ಯಂತ್ರಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ಇದೇವೇಳೆ, ಸುರಂಗದ ಮುಖ್ಯ ದ್ವಾರದಲ್ಲಿ ನಿರ್ಮಿಸಲಾಗಿರುವ ದೇವಾಲಯದಲ್ಲಿ ಸಂತ್ರಸ್ತರು ಸುರಕ್ಷಿತವಾಗಿ ಇರಲೆಂದು ಪ್ರಾರ್ಥನೆ ಸಲ್ಲಿಸಲಾಯಿತು.
'ನಾವು ಸುರಂಗದಲ್ಲಿ ಸಿಲುಕಿರುವವರನ್ನು ಹೊರಗೆ ತರಲಿದ್ದೇವೆ. ಇಲ್ಲಿ ಉತ್ತಮವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಮ್ಮ ಇಡೀ ತಂಡ ಇಲ್ಲಿದೆ. ನಾವು ಶೀಘ್ರ ಪರಿಹಾರವನ್ನು ಹುಡುಕುತ್ತೇವೆ ಸುರಂಗದಲ್ಲಿ ಸಿಲುಕಿರುವವರನ್ನು ಸುರಕ್ಷಿತವಾಗಿ ಹೊರತರುವುದು ನಮ್ಮ ಆದ್ಯತೆಯಾಗಿದೆ.ಇಡೀ ಜಗತ್ತು ನಮಗೆ ಸಹಾಯ ಮಾಡುತ್ತಿದೆ. ಇಲ್ಲಿನ ತಂಡ ಮತ್ತು ಯೋಜನೆಗಳೂ ಅದ್ಭುತವಾಗಿವೆ. ಸುರಂಗದಲ್ಲಿ ಸಿಲುಕಿರುವವರಿಗೆ ಆಹಾರ ಮತ್ತು ಔಷಧಿಗಳನ್ನು ಕಾಲ ಕಾಲಕ್ಕೆ ಒದಗಿಸಲಾಗುತ್ತಿದೆ' ಎಂದು ಅಂತರರಾಷ್ಟ್ರೀಯ ಸುರಂಗ ತಜ್ಞ ಆರ್ನಾಲ್ಡ್ ಡಿಕ್ಸ್ ಹೇಳಿದ್ದಾರೆ.
ಈ ನಡುವೆ, ರಕ್ಷಣಾ ಕಾರ್ಯಾಚರಣೆ ಬಗ್ಗೆ ಗಮನ ಕೇಂದ್ರೀಕರಿಸಿರುವ ಪ್ರಧಾನಿ ಮೋದಿ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ದೂರವಾಣಿ ಕರೆ ಮಾಡಿ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ. ಕಾರ್ಯಾಚರಣೆಗೆ ಅಗತ್ಯವಿರುವ ರಕ್ಷಣಾ ಉಪಕರಣಗಳು ಮತ್ತು ಸಂಪನ್ಮೂಲಗಳನ್ನು ಒದಗಿಸಲಾಗುವುದು ಎಂದು ಮೋದಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದೇವೇಳೆ, ಸುರಂಗದಲ್ಲಿ ಸಿಲುಕಿರುವ ಸಂತ್ರಸ್ತರ ಸಂಬಂಧಿಕರ ಪ್ರಯಾಣದ ವೆಚ್ಚವನ್ನು ಭರಿಸಲು ಸರ್ಕಾರ ನಿರ್ಧರಿಸಿದೆ.