ನವದೆಹಲಿ : ಭಾರತದಲ್ಲಿ ಚುನಾವಣೆಗಳ ವಿಶ್ವಾಸಾರ್ಹತೆ ಮತ್ತು ರಾಜಕೀಯ ಪಕ್ಷಗಳ ಸ್ವಾತಂತ್ರ್ಯ ಗಮನಾರ್ಹವಾಗಿ ಕುಸಿದಿವೆ ಎಂದು ಸ್ಟಾಕ್ಹೋಮ್ ನ ಅಂತರ್ಸರಕಾರಿ ಸಂಸ್ಥೆ ಇನ್ಸ್ಟಿಟ್ಯೂಟ್ ಫಾರ್ ಡೆಮಾಕ್ರಸಿ ಆಯಂಡ್ ಇಲೆಕ್ಟೋರಲ್ ಅಸಿಸ್ಟನ್ಸ್ ಈ ವಾರ ಬಿಡುಗಡೆಗೊಳಿಸಿದ ತನ್ನ ಅಧ್ಯಯನ ವರದಿಯಲ್ಲಿ ಹೇಳಿದೆ.
ಪ್ರಜಾಪ್ರಭುತ್ವದ ಸ್ಥಿತಿ ಕುರಿತು ಸಂಸ್ಥೆಯ 2023ರ ಜಾಗತಿಕ ವರದಿಯು ಏಶ್ಯಾ ಮತ್ತು ಪೆಸಿಫಿಕ್ ಪ್ರದೇಶಗಳಾದ್ಯಂತ ಪ್ರಜಾಪ್ರಭುತ್ವದಲ್ಲಿ ಕುಸಿತವನ್ನು ಎತ್ತಿ ತೋರಿಸಿದೆ.
ಸಂಸ್ಥೆಯು ಪ್ರಾತಿನಿಧ್ಯ, ಹಕ್ಕುಗಳು, ಕಾನೂನಿನ ಆಡಳಿತ ಮತ್ತು ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕರ ಸಹಭಾಗಿತ್ವ ; ಈ ನಾಲ್ಕು ಅಂಶಗಳನ್ನು ಆಧರಿಸಿ ದೇಶವೊಂದರ ಪ್ರಜಾಸತ್ತಾತ್ಮಕ ಸಾಧನೆಯನ್ನು ಶ್ರೇಣೀಕರಿಸುತ್ತದೆ.
ಚುನಾವಣೆಗಳ ವಿಶ್ವಾಸಾರ್ಹತೆ ಮತ್ತು ರಾಜಕೀಯ ಪಕ್ಷಗಳ ಸ್ವಾತಂತ್ರ್ಯವನ್ನು ಮಾನದಂಡಗಳನ್ನಾಗಿ ಹೊಂದಿರುವ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ 2022ರಲ್ಲಿ ಭಾರತವು 173 ದೇಶಗಳಲ್ಲಿ 66ನೇ ಸ್ಥಾನದಲ್ಲಿದೆ. ಅದು ಹಿಂದಿನ ವರ್ಷಕ್ಕಿಂತ ನಾಲ್ಕು ಸ್ಥಾನ ಕೆಳಕ್ಕಿಳಿದಿದೆ.
ಫೇಸ್ ಬುಕ್ ಬಿಜೆಪಿಯ ಪರ ಒಲವನ್ನು ಹೊಂದಿದೆ ಮತ್ತು ಅದರ ನಾಯಕರ ದ್ವೇಷ ಭಾಷಣಗಳನ್ನೂ ಕಡೆಗಣಿಸಿದೆ. ಪರಿಣಾಮವಾಗಿ ಪಕ್ಷವು ಚುನಾವಣಾ ಲಾಭಗಳನ್ನು ಪಡೆದುಕೊಳ್ಳುತ್ತಿದೆ ಎಂಬ ಆರೋಪಗಳನ್ನು ವರದಿಯು ಎತ್ತಿ ತೋರಿಸಿದೆ. ಆಗಸ್ಟ್ 2020ರಲ್ಲಿ ದಿ ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿಯ ಲೇಖನವೊಂದರಲ್ಲಿ ಈ ಆರೋಪಗಳನ್ನು ಮಾಡಲಾಗಿತ್ತು.
ಆಗ ಭಾರತದಲ್ಲಿ ಫೇಸ್ ಬುಕ್ ನ ಸಾರ್ವಜನಿಕ ನೀತಿ ನಿರ್ದೇಶಕಿಯಾಗಿದ್ದ ಅಂಖಿ ದಾಸ್ ಅವರು ಬಿಜೆಪಿ ನಾಯಕ ಟಿ.ರಾಜಾ ಸಿಂಗ್ ಅವರ ಪ್ರಚೋದನಕಾರಿ ಪೋಸ್ಟುಗಳನ್ನು ತೆಗೆದುಹಾಕುವುದನ್ನು ವಿರೋಧಿಸಿದ್ದರು. ಇದರಿಂದಾಗಿ ಭಾರತದಲ್ಲಿಯ ಕಂಪನಿಯ ವಾಣಿಜ್ಯ ಹಿತಾಸಕ್ತಿಗಳಿಗೆ ಹೊಡೆತ ಬೀಳಬಹುದು ಎಂದು ಅವರು ಹೇಳಿದ್ದರು ಎಂದು ಜರ್ನಲ್ ವರದಿ ಮಾಡಿತ್ತು. ಭಾರತದಲ್ಲಿಯ ರೊಹಿಂಗ್ಯಾ ಮುಸ್ಲಿಮ್ ವಲಸಿಗರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಸಿಂಗ್ ಹೇಳಿದ್ದರು.
ಚುನಾವಣಾ ಆಯುಕ್ತರ ನೇಮಕಾತಿಗಳಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಗಳಿಗೆ ಸಲಹೆ ನೀಡುವ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ)ರನ್ನು ಹೊರಗಿಡಲು ರಾಜ್ಯಸಭೆಯಲ್ಲಿ ಮಂಡಿಸಲಾದ ಮಸೂದೆಯನ್ನೂ ವರದಿಯು ಗಮನಕ್ಕೆ ತೆಗೆದುಕೊಂಡಿದೆ.
ಮಸೂದೆಯು ಸಿಜೆಐ ಬದಲು ಪ್ರಧಾನಿಯಿಂದ ನಾಮನಿರ್ದೇಶಿತ ಸಂಪುಟ ಸಚಿವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಕಗೊಳಿಸಲು ಉದ್ದೇಶಿಸಿದೆ. ಈ ಕ್ರಮವು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಅಯುಕ್ತರ ಆಯ್ಕೆಯ ವಿಷಯವನ್ನು ಮರಳಿ ಕೇಂದ್ರದ ನಿಯಂತ್ರಣಕ್ಕೆ ತರುತ್ತದೆ.
ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ದೋಷನಿರ್ಣಯವು 'ರಾಜಕೀಯ ಪಕ್ಷಗಳನ್ನು ಸಮಾನವಾಗಿ ಪರಿಗಣಿಸುವ ' ಕುರಿತು ಪ್ರಶ್ನೆಗಳನ್ನೆತ್ತಿದೆ ಎಂದು ಹೇಳಿರುವ ವರದಿಯು, ಪ್ರಕರಣದಲ್ಲಿ ನಡೆದಿದೆ ಎನ್ನಲಾಗಿರುವ ಪಕ್ಷಪಾತವನ್ನು ಬೆಟ್ಟು ಮಾಡಿದೆ.