HEALTH TIPS

ಗಾಜಾ ಆಸ್ಪತ್ರೆ ತೊರೆಯುತ್ತಿರುವ ರೋಗಿಗಳು, ವೈದ್ಯರು

                 ಖಾನ್‌ ಯೂನಿಸ್‌: ಇಸ್ರೇಲ್‌ ಸೇನೆಯು ನಿಯಂತ್ರಣಕ್ಕೆ ತೆಗೆದುಕೊಂಡಿರುವ ಗಾಜಾ ಪಟ್ಟಿಯ ಅತಿದೊಡ್ಡ ಆಸ್ಪತ್ರೆ ಅಲ್‌ ಶಿಫಾವನ್ನು ಬಹಳಷ್ಟು ಸಂಖ್ಯೆಯ ರೋಗಿಗಳು ಮತ್ತು ವೈದ್ಯರು ಹಾಗೂ ಸಿಬ್ಬಂದಿ ಶನಿವಾರ ತೊರೆದರು ಎಂದು ಗಾಜಾ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

               ಸೇನಾ ಕಾರ್ಯಾಚರಣೆಯ ನಡುವೆ ಶಿಫಾ ಆಸ್ಪತ್ರೆಯನ್ನು ಸಾಮೂಹಿಕವಾಗಿ ತೊರೆಯಲು ರೋಗಿಗಳು ಮತ್ತು ವೈದ್ಯಕೀಯ ಸಿಬ್ಬಂದಿಗೆ ಇಸ್ರೇಲ್‌ ಸೇನೆ ಮತ್ತು ಪ್ಯಾಲೆಸ್ಟೀನ್‌ ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಅನುವು ಮಾಡಿಕೊಟ್ಟರು. ನೂರಾರು ಸಂಖ್ಯೆಯಲ್ಲಿ ರೋಗಿಗಳು ಮತ್ತು ನಾಗರಿಕರು ನಡೆದುಕೊಂಡೇ ಆಸ್ಪತ್ರೆಯ ಸಂಕೀರ್ಣದಿಂದ ಸುರಕ್ಷಿತ ಸ್ಥಳಗಳತ್ತ ತೆರಳಿದರು.

              ರೋಗಿಗಳನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲು ಶನಿವಾರ ಬೆಳಿಗ್ಗೆ ಇಸ್ರೇಲ್‌ ಸೇನೆಯಿಂದ ಆರೋಗ್ಯ ಅಧಿಕಾರಿಗಳಿಗೆ ಆದೇಶ ರವಾನೆಯಾಗಿತ್ತು. ಆಸ್ಪತ್ರೆಯಿಂದ ನಿರ್ಗಮಿಸುವವರಿಗೆ ಸುರಕ್ಷಿತ ಮಾರ್ಗ ತೆರೆಯಲಾಗಿದೆ ಎಂದು ಸೇನೆಯು ತಿಳಿಸಿದೆ.

                     ಆಸ್ಪತ್ರೆ ತೊರೆಯುವ ಮೊದಲು, ರೋಗಿಗಳು, ಚಿಕಿತ್ಸೆಗೆ ಬಂದಿದ್ದವರು ಸೇರಿದಂತೆ ಸಾವಿರಾರು ಜನರು ಶಿಫಾದಲ್ಲಿ ಭೀಕರ ಪರಿಸ್ಥಿತಿಯನ್ನು ಎದುರಿಸಿದರು.

              ಶಿಫಾ ಆಸ್ಪತ್ರೆಯ ಕಟ್ಟಡದಡಿ ಹಮಾಸ್‌ ಕಾರ್ಯಾಚರಣೆಯ ಪ್ರಧಾನ ಕೇಂದ್ರ ಮತ್ತು ಅಡಗುದಾಣಗಳ ಸುರಂಗ ಮಾರ್ಗಗಳಿವೆ, ರೋಗಿಗಳನ್ನು, ನಾಗರಿಕರನ್ನು ಹಮಾಸ್‌ ಮಾನವ ಗುರಾಣಿಯಾಗಿ ಬಳಸುತ್ತಿದೆ ಎಂದು ಆರೋಪಿಸುತ್ತಲೇ ಇರುವ ಇಸ್ರೇಲ್‌ ಸೇನೆ, ಸಾಕ್ಷ್ಯಗಳಿಗಾಗಿ ತೀವ್ರ ಶೋಧವನ್ನು ಶನಿವಾರ ಕೂಡ ಮುಂದುವರಿಸಿತು.

                    ಹಮಾಸ್ ಕುರುಹುಗಳಿಗಾಗಿ ಸೇನಾ ಶೋಧ ನಿಧಾನವಾಗಿ ನಡೆಯುತ್ತಿದೆ ಎಂದು ಒಪ್ಪಿಕೊಂಡಿರುವ ಇಸ್ರೇಲ್‌ ಸೇನೆ ವಕ್ತಾರ ಕರ್ನಲ್ ರಿಚರ್ಡ್ ಹೆಕ್ಟ್ ಅವರು, 'ಇದು ಇನ್ನಷ್ಟು ಸಮಯ ತೆಗೆದುಕೊಳ್ಳಲಿದೆ' ಎಂದೂ ಹೇಳಿದ್ದಾರೆ.

                                               'ಬೃಹತ್‌ ಬಂದೀಖಾನೆಯಾಗಿದೆ ಶಿಫಾ'

                 'ಶಿಫಾ ಆಸ್ಪತ್ರೆ ಈಗ ಬೃಹತ್‌ ಕಾರಾಗೃಹವಾಗಿ ಮಾರ್ಪಟ್ಟಿದೆ. ನಮ್ಮನ್ನು ಸಾವು ಸುತ್ತವರಿದಿದೆ' ಎಂದು ಆಸ್ಪತ್ರೆಯ ವೈದ್ಯರು ಹೇಳಿಕೊಂಡಿದ್ದಾರೆ.

                  ಆಸ್ಪತ್ರೆಯ ಸಂಕೀರ್ಣದ ಸುತ್ತಲೂ ಇಸ್ರೇಲ್‌ ಪಡೆಗಳು ಸುತ್ತುವರಿದ ನಂತರ, ರೋಗಿಗಳು, ಸಿಬ್ಬಂದಿ ಮತ್ತು ನಾಗರಿಕರು ಸೇರಿ ಸುಮಾರು 7,000 ಜನರು ಆಸ್ಪತ್ರೆಯೊಳಗೆ ಸಿಲುಕಿದ್ದು, ಆಸ್ಪತ್ರೆಗೆ ಅಲ್ಪ ಪ್ರಮಾಣದ ಆಹಾರ ಪೂರೈಕೆಯಾಗುತ್ತಿದೆ. ವಾರದಿಂದ ಕತ್ತಲೆ ಆವರಿಸಿದೆ. ಮಕ್ಕಳ ಇನ್‌ಕ್ಯುಬೇಟರ್‌ ಮತ್ತು ತೀವ್ರ ನಿಗಾ ಘಟಕಗಳ ವೆಂಟಿಲೇಟರ್‌ಗಳು ಸ್ಥಗಿತಗೊಂಡಿವೆ ಎಂದು ಅವರು ಹೇಳಿದ್ದಾರೆ.

               'ಇಸ್ರೇಲ್‌ ಪಡೆಗಳು ಆಸ್ಪತ್ರೆಯ ಜನರೇಟರ್‌ಗಳಿಗೆ ಇಂಧನ ಪೂರೈಸಬೇಕು ಅಥವಾ ಎಲ್ಲರನ್ನೂ ಸ್ಥಳಾಂತರಿಸಲು ಅನುಮತಿಸಬೇಕು' ಎಂದು ಅಲ್‌ ಶಿಫಾ ಆಸ್ಪತ್ರೆಯ ನಿರ್ದೇಶಕ ಮೊಹಮ್ಮದ್ ಅಬು ಸೆಲ್ಮಿಯಾ 'ಅಲ್ ಜಜೀರಾ ಟೆಲಿವಿಜನ್‌'ಗೆ ತಿಳಿಸಿದ್ದಾರೆ.

                ಶಿಫಾಗೆ 4,000 ಲೀಟರ್ ನೀರು ಮತ್ತು 1,500 ಸಿದ್ಧ ಊಟವನ್ನು ವಿತರಿಸಲಾಗುತ್ತಿದೆ ಎಂದು ಇಸ್ರೇಲ್‌ ಸೇನೆ ಹೇಳಿದೆ. ಆದರೆ, ಅಲ್ಲಿರುವ ಜನರ ಸಂಖ್ಯೆಗೆ ಇದು ತುಂಬಾ ಕಡಿಮೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದರು.

                                                          ಸಂವಹನ- ಸಂಪರ್ಕ ಭಾಗಶಃ ಪುನರಾರಂಭ

                      ಗಾಜಾ ಪಟ್ಟಿಯಲ್ಲಿ ಶನಿವಾರ ಇಂಟರ್‌ನೆಟ್‌ ಮತ್ತು ಮೊಬೈಲ್‌ ಸಂಪರ್ಕ ಸೇವೆ ಹಾಗೂ ಇಂಧನ ಪೂರೈಕೆ ನಿರ್ಬಂಧ ಸಡಿಲಗೊಂಡಿದ್ದು, ಈ ಸೇವೆಗಳು ಭಾಗಶಃ ಮರುಸ್ಥಾಪನೆಗೊಂಡಿವೆ.

ಗಾಜಾ ಪಟ್ಟಿಗೆ ಇಸ್ರೇಲ್‌ ಸೇನೆ, ನೀರು, ಆಹಾರ, ಇಂಧನ ಪೂರೈಕೆ ಹಾಗೂ ಸಂವಹನ ಸಂಪರ್ಕಗಳನ್ನು ದೀರ್ಘಾವಧಿಗೆ ನಿರ್ಬಂಧಿಸಿತ್ತು. ಇದರಿಂದಾಗಿ, ವಿಶ್ವಸಂಸ್ಥೆಯ ಬೆಂಗಾವಲು ಪಡೆಗಳು ಮತ್ತು ಮಾನವೀಯ ನೆರವು ಪೂರೈಕೆ ಏಜೆನ್ಸಿಗಳಿಗೆ, ಯುದ್ಧಪೀಡಿತ ಪ್ರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಆಹಾರ, ಔಷಧ ಹಾಗೂ ತುರ್ತು ಮಾನವೀಯ ನೆರವು ಪೂರೈಸುವ ಮಾರ್ಗಗಳೆಲ್ಲವೂ ಸಂಪೂರ್ಣ ಮುಚ್ಚಿಹೋಗಿದ್ದವು.

                ಮಾನವೀಯ ನೆರವು ವಿತರಣೆ ನಿರ್ವಹಿಸುತ್ತಿರುವ ವಿಶ್ವಸಂಸ್ಥೆಯ ಏಜೆನ್ಸಿಗಳ ಅನುಕೂಲಕ್ಕೆ ಮತ್ತು ಸಂವಹನ ಸಂಪರ್ಕ ಪುನರ್‌ ಸ್ಥಾಪನೆಗಾಗಿ ಪ್ರತಿದಿನ ಗಾಜಾಕ್ಕೆ 10,000 ಲೀಟರ್‌ನಷ್ಟು ಇಂಧನ ಪೂರೈಸಲು ಅನುಮತಿಸುವುದಾಗಿ ಹೇಳಿದೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ವೈಮಾನಿಕ ದಾಳಿಗೆ 26 ಪ್ಯಾಲೆಸ್ಟೀನಿಯರ ಸಾವು

                ಈ ನಡುವೆ ಶನಿವಾರ ನಸುಕಿನಲ್ಲಿ ಇಸ್ರೇಲ್‌ ಖಾನ್ ಯೂನಿಸ್‌ನ ಹಮದ್‌ ನಗರದಲ್ಲಿ ವಸತಿ ಕಟ್ಟಡದ ಮೇಲೆ ನಡೆಸಿರುವ ವೈಮಾನಿಕ ದಾಳಿಯಲ್ಲಿ 26 ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ನಾಸಿರ್‌ ಖಾನ್‌ ಆಸ್ಪತ್ರೆಯ ವೈದ್ಯರಾದ ನೆಹದ್‌ ತಾಯಿಮಾ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries