ಕೊಚ್ಚಿ: ಕೇರಳದ ಕೊಚ್ಚಿಯ ಖ್ಯಾತ ಫುಡ್ ವ್ಲಾಗರ್ ರಾಹುಲ್ ಎನ್. ಕುಟ್ಟಿ ಶನಿವಾರ (ನ.4) ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಹುಲ್ ಕುಟ್ಟಿಯ ಪೋಷಕರು ಮತ್ತು ಸ್ನೇಹಿತರು ಆತ ಮಲಗಿದ್ದ ಕೋಣೆಯ ಬಾಗಿಲು ತೆಗೆಯದ ಕಾರಣ, ಅನುಮಾನಗೊಂಡು ಒಳ ಪ್ರವೇಶಿಸಿದಾಗ ರೂಂನಲ್ಲಿ ರಾಹುಲ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಕುಟುಂಬಸ್ಥರು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ವೈದ್ಯರು ಅವರು ಮೃತಪಟ್ಟಿರುವುದನ್ನು ದೃಢಪಡಿಸಿರುವುದು ಇದೀಗ ಬೆಳಕಿಗೆ ಬಂದಿದೆ.
'ಈಟ್ ಕೊಚ್ಚಿ ಈಟ್' ಭಾಗವಾಗಿದ್ದ ವ್ಲಾಗರ್ ರಾಹುಲ್, ನಗರದ ಹಲವು ಆಹಾರ ಕೇಂದ್ರಗಳನ್ನು ಜನರಿಗೆ ಪರಿಚಯಿಸುವ ಕೆಲಸವನ್ನು ಮಾಡುತ್ತಿದ್ದರು. ರಾಹುಲ್ ಮೃತಪಟ್ಟ ಸುದ್ದಿ ಕೇಳಿ ದುಃಖತಪ್ತರಾದ ಈಟ್ ಕೊಚ್ಚಿ ಈಟ್ ಪುಟ, 'ನಮ್ಮ ಪ್ರೀತಿಯ ರಾಹುಲ್ ಎನ್. ಕುಟ್ಟಿ ನಿಧನರಾದ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ತುಂಬಾ ದುಃಖಿತರಾಗಿದ್ದೇವೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕೊಡಲಿ ಎಂದು ಹಾರೈಸುತ್ತೇವೆ' ಎಂದು ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
33 ವರ್ಷಕ್ಕೆ ಇಹಲೋಕ ತ್ಯಜಿಸಿದ ರಾಹುಲ್ ನೆನೆದು ಸ್ನೇಹಿತರು, ಕುಟುಂಸ್ಥರು ಮತ್ತು ಅವರ ಅನುಯಾಯಿಗಳು ಕಣ್ಣೀರಿಟ್ಟಿದ್ದಾರೆ. ಸದ್ಯ ನಗರದ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಇದು ಅಸ್ವಾಭಾವಿಕ ಸಾವು, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.