ನವದೆಹಲಿ: ದಕ್ಷಿಣ ಧ್ರುವದ ಅಂಟಾರ್ಕ್ಟಿಕ ಭಾಗದ ವಾಯುಮಂಡಲದಲ್ಲಿರುವ ಓಝೋನ್ ಪದರದ ರಂಧ್ರವು ಈ ಮೊದಲು ಗ್ರಹಿಸಿದ್ದಕ್ಕಿಂತ ದೊಡ್ಡದೇ ಇದೆ. ಅದರಲ್ಲೂ, ಕಳೆದ ಮೂರು ವರ್ಷಗಳ ಅವಧಿಯಲ್ಲಿ ದಾಖಲಾಗಿರುವ ರಂಧ್ರಗಳ ಪೈಕಿ, ಇದೇ ದೊಡ್ಡದು ಎಂದು ಹೊಸ ಸಂಶೋಧನೆಯಿಂದ ತಿಳಿದುಬಂದಿದೆ.
ಅಂಟಾರ್ಕ್ಟಿಕ ಭಾಗದಲ್ಲಿರುವ ಈ ಓಝೋನ್ ಪದರ ದೊಡ್ಡದು ಮಾತ್ರವಲ್ಲ, ಕಳೆದ ನಾಲ್ಕು ವರ್ಷಗಳಿಂದಲೂ ಅಸ್ತಿತ್ವದಲ್ಲಿದೆ ಎಂದು ನ್ಯೂಜಿಲೆಂಡ್‌ನ ಒಟಾಗೊ ವಿಶ್ವವಿದ್ಯಾಲಯದ ಸಂಶೋಧಕ ಹನ್ನ್ಹಾ ಕೆಸೆನಿಕ್ ನೇತೃತ್ವದ ತಂಡ ಕೈಗೊಂಡಿರುವ ಅಧ್ಯಯನದಿಂದ ತಿಳಿದುಬಂದಿದೆ.
ಈ ಅಧ್ಯಯನ ವರದಿಯು ವೈಜ್ಞಾನಿಕ ನಿಯತಕಾಲಿಕ 'ನೇಚರ್ ಕಮ್ಯುನಿಕೇಷನ್ಸ್ 'ನಲ್ಲಿ ಪ್ರಕಟವಾಗಿದೆ.
19 ವರ್ಷಗಳ ಹಿಂದಿನ ಪ್ರಮಾಣಕ್ಕೆ ಹೋಲಿಸಿದಲ್ಲಿ, ಈಗ ಇಲ್ಲಿ ಕಡಿಮೆ ಪ್ರಮಾಣದ ಓಝೋನ್ ಇರುವುದು ಕಂಡುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಓಝೋನ್ ಪದರ ಸವಕಳಿಯಾಗುವುದಕ್ಕೆ ಕ್ಲೋರೊಫ್ಲೋರೊಕಾರ್ಬನ್ ರಾಸಾಯನಿಕಗಳು (ಸಿಎಫ್‌ಸಿ) ಮಾತ್ರ ಕಾರಣವಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
'ಅಂಟಾರ್ಕ್ಟಿಕ ಭಾಗದ ವಾಯುಮಂಡಲದಲ್ಲಿರುವ ಓಝೋನ್ ಪ್ರಮಾಣದಲ್ಲಿನ ಸವಕಳಿ ಹಾಗೂ ಧ್ರುವ ಪ್ರದೇಶದಲ್ಲಿನ ಗಾಳಿಯಲ್ಲಿನ ಬದಲಾವಣೆಗಳ ನಡುವಿನ ಸಂಬಂಧ ಕುರಿತು ಅಧ್ಯಯನ ನಡೆಸಲಾಯಿತು. ಸಿಎಫ್‌ಸಿಗಳಿಂದಾಗಿಯೇ ದೊಡ್ಡ ಪ್ರಮಾಣದ ಓಝೋನ್ ರಂಧ್ರ ಸೃಷ್ಟಿಯಾಗಿರಲಿಕ್ಕಿಲ್ಲ ಎಂಬುದರತ್ತ ಈ ಅಧ್ಯಯನ ಬೊಟ್ಟು ಮಾಡಿದೆ' ಎಂದು ಕೆಸೆನಿಕ್ ಹೇಳಿದ್ದಾರೆ.
ಅಧ್ಯಯನದ ಪ್ರಮುಖ ಅಂಶಗಳು
* 2004ರಿಂದ 2022ರ ವರೆಗೆ ವಿವಿಧ ಅಕ್ಷಾಂಶ ಮತ್ತು ರೇಖಾಂಶಗಳಲ್ಲಿ ದಿನವಹಿ ಹಾಗೂ ತಿಂಗಳಲ್ಲಿ ಓಝೋನ್‌ನಲ್ಲಿ ಕಂಡುಬಂದ ಬದಲಾವಣೆಗಳ ಅಧ್ಯಯನ
* ದಕ್ಷಿಣ ಗೋಳಾರ್ಧದ ಹವಾಮಾನ ವಿಷಯದಲ್ಲಿ ಓಝೋನ್ ಪದರ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ಅಂಟಾರ್ಕ್ಟಿಕ ಭಾಗದಲ್ಲಿ ಓಝೋನ್ ಪದರದಲ್ಲಿ ಆಗುವ ವ್ಯತ್ಯಾಸದ ಅಧ್ಯಯನ ಅಗತ್ಯ
* ಇತ್ತೀಚೆಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಕಂಡಬಂದ ಕಾಳ್ಗಿಚ್ಚುಗಳು ಚಂಡಮಾರುತಗಳು ಹಾಗೂ ಅಂಟಾರ್ಕ್ಟಿಕ ಭಾಗದ ಓಝೋನ್ ರಂಧ್ರದ ಸವಕಳಿಯು ಹವಾಮಾನ ಬದಲಾವಣೆ ಪರಿಣಾಮ ಕುರಿತು ಹೊಸ ಹೊಳಹು ನೀಡುತ್ತವೆ
* ಸೂರ್ಯನಿಂದ ಬರುವ ಹಾನಿಕಾರಕ ವಿಕಿರಣಗಳಿಂದ ನಮ್ಮನ್ನು ರಕ್ಷಿಸುವ ಓಝೋನ್ ಅನಿಲ ಪದರವು ಹಾಳಾದಲ್ಲಿ ಅಂಟಾರ್ಕ್ಟಿಕದ ಮೇಲ್ಮೈನಲ್ಲಿ ವಿಕಿರಣಗಳ ಮಟ್ಟ ಹೆಚ್ಚುವುದು ಮಾತ್ರವಲ್ಲ ಅಲ್ಲಿನ ವಾತಾವರಣದಲ್ಲಿನ ತಾಪಮಾನದ ಮೇಲೂ ಭಾರಿ ಪರಿಣಾಮವನ್ನುಂಟು ಮಾಡುತ್ತದೆ.