ಕಾಸರಗೋಡು: ಆಟೋ ರಿಕ್ಷಾ ತಡೆದುನಿಲ್ಲಿಸಿ ಯುವಕನನ್ನು ಇರಿದು ಕೊಲೆಗೈದ ಪ್ರಕರಣದ ಅಪರಾಧಿ, ಪನತ್ತಡಿ ಚಾಮುಂಡಿಕುನ್ನು ಶಿವಪುರ ನಿವಾಸಿ, ಕೆ.ಎಂ.ಜೋಸೆಫೀನ್ (58) ಎಂಬಾತನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸತ್ರ (ಪ್ರಥಮ) ನ್ಯಾಯಾಲಯದ ನ್ಯಾಯಾಧೀಶ ಎ ಮನೋಜ್ ಅವರು ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಐದು ವರ್ಷ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.
2014ರ ಜೂನ್ 25ರಂದು ರಾತ್ರಿ 10ಕ್ಕೆ ಪನತ್ತಡಿ ಚಾಮುಂಡಿಕುನ್ನಿನಲ್ಲಿ ಘಟನೆ ನಡೆದಿದ್ದು, ಆಟೋದಲ್ಲಿ ತೆರಳುತ್ತಿದ್ದ ಅರುಣ್ ಮೋಹನ್ ಯಾನೆ ಲಾಲ್ ಹಾಗೂ ಬಿಜು ಕೆ.ಜೆ. ಅವರನ್ನು ಕೆ.ಎಂ ಜೋಸೆಫ್ ಆಟೋ ತಡೆದು ಚಾಕುವಿನಿಂದ ಇರಿದಿದ್ದು, ಇವರಲ್ಲಿ ಗಂಭೀರ ಗಾಯಗೊಂಡ ಅರುಣ್‍ಮೋಹನ್ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿರುವ ಬಗ್ಗೆ ರಾಜಾಪುರಂ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ನಂತರ ವೆಳ್ಳರಿಕುಂಟು ಠಾಣೆ ಇನ್ಸ್‍ಪೆಕ್ಟರ್ ಎಂ.ಕೆ.ಸುರೇಶ್ ಕುಮಾರ್ ಕೊಲೆ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.