HEALTH TIPS

ಮಾದಕ ವಸ್ತುಗಳೇ ಚುನಾವಣಾ ಚರ್ಚೆಯ ಕೇಂದ್ರಬಿಂದು

                 ಗಂಗಾನಗರ : ಬಿಕಾನೇರ್‌ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ರಮೇಶ್ ಕುಮಾರ್ ಅವರು ಹೆರಾಯಿನ್ ಸೇವನೆಯ ಚಟಕ್ಕೆ ದಾಸರಾದರು. ಅದನ್ನು ಬಿಟ್ಟುಬಿಡುವ ಮನಸ್ಸು ಮಾಡುವ ಹೊತ್ತಿಗೆ ಐದು ವರ್ಷಗಳು ಕಳೆದಿದ್ದವು.

              ಕುಮಾರ್ ಅವರು ಈಗ ಈ ಚಟದ ಹಿಡಿತದಿಂದ ಹೊರಬರುವ ಕಷ್ಟದ ಹಾದಿಯಲ್ಲಿದ್ದಾರೆ.

ಗಂಗಾನಗರದಲ್ಲಿ ಇಂಥವರು ಹಲವರಿದ್ದಾರೆ. ದುಶ್ಚಟದ ಹಿಡಿತದಿಂದ ತಪ್ಪಿಸಿಕೊಳ್ಳಲು ಅಲ್ಲಿ ಹಲವರು ವ್ಯಸನ ವರ್ಜನ ಶಿಬಿರಗಳಿಗೆ ಬರುತ್ತಾರೆ. ಗಂಗಾನಗರ ಜಿಲ್ಲೆಗೆ ಗಡಿಯಾಚೆಯಿಂದ ಮಾದಕ ವಸ್ತುಗಳನ್ನು ತರಲಾಗುತ್ತಿದೆ.

                 ಪಾಕಿಸ್ತಾನ ಗಡಿಗೆ ಸನಿಹದಲ್ಲಿರುವ ಈ ಜಿಲ್ಲೆಯ ಜನ, ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಈ ಹೊತ್ತಿನಲ್ಲಿ ಮಾದವಸ್ತುಗಳ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು ಎಂದು ಆಗ್ರಹಿಸುತ್ತಿದ್ದಾರೆ. 'ನಾನು ಹೆರಾಯಿನ್‌ ದಾಸನಾಗಿದ್ದೆ. ಬಿಕಾನೇರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಸ್ನೇಹಿತರು ಹೆರಾಯಿನ್ ಸೇವಿಸುವಂತೆ ಮಾಡಿದರು. ಆರಂಭದಲ್ಲಿ ಕುತೂಹಲಕ್ಕೆ ಸೇವಿಸಿದ ನಾನು, ನಂತರ ಅದಕ್ಕೆ ದಾಸನಾದೆ. ಹೆರಾಯಿನ್ ಸೇವಿಸದಿದ್ದರೆ ನನಗೆ ತಲೆನೋವು, ಹೊಟ್ಟೆನೋವು ಬರುತ್ತಿತ್ತು. ಕೆಲಸ ಮಾಡಲು ಮನಸ್ಸಿರುತ್ತಿರಲಿಲ್ಲ. ಕೊನೆಯಲ್ಲಿ ನಾನು ಕೆಲಸ ಬಿಡಬೇಕಾಯಿತು' ಎಂದು ಕುಮಾರ್ ಹೇಳುತ್ತಾರೆ.

                 ವ್ಯಸನ ವರ್ಜನ ಚಿಕಿತ್ಸೆಯನ್ನು ಪೂರ್ಣಗೊಳಿಸುವ ಹಂತದಲ್ಲಿರುವ ಕುಮಾರ್, ಜನರಲ್ಲಿ ಅರಿವು ಮೂಡಿಸಲು ಸರ್ಕಾರ ಕೂಡ ಏನಾದರೂ ಮಾಡಬೇಕು ಎಂದು ಹೇಳುತ್ತಾರೆ. 26 ವರ್ಷ ವಯಸ್ಸಿನ ಸಿಂಧು ಅವರು ತಮ್ಮ ಪತಿಯನ್ನು ಇಂತಹ ಚಿಕಿತ್ಸಾ ಕೇಂದ್ರಕ್ಕೆ ಸೇರಿಸಿದ್ದಾರೆ. ಇಲ್ಲಿ ಅವ್ಯಾಹತವಾಗಿರುವ ಮಾದಕ ವಸ್ತುಗಳ ಬಳಕೆಯು ಯಾರಲ್ಲೂ ಆಶ್ಚರ್ಯ ಮೂಡಿಸುತ್ತಿಲ್ಲ.

'ಇಲ್ಲಿ ಮಾದಕ ವಸ್ತುಗಳ ಬಳಕೆಯು ದೊಡ್ಡ ಮಟ್ಟದಲ್ಲಿದೆ. ಈ ಸಮಸ್ಯೆಯನ್ನು ಶಾಶ್ವತವಾಗಿ ಇಲ್ಲವಾಗಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಈ ಸಮಸ್ಯೆಯು ಕುಟುಂಬಗಳನ್ನು ನಾಶ ಮಾಡುತ್ತಿದೆ' ಎಂದು ಸಿಂಧು ಅವರು ಹೇಳುತ್ತಾರೆ. ಸಮಸ್ಯೆಯನ್ನು ಕೊನೆಗೊಳಿಸುವುದಾಗಿ ಪ್ರತಿ ಚುನಾವಣೆಯಲ್ಲಿಯೂ ಹೇಳುವ ರಾಜಕಾರಣಿಗಳು ನಂತರ ಆ ಬಗ್ಗೆ ಗಮನ ಹರಿಸುವುದೇ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.

                 ಈ ಸಮಸ್ಯೆಯ ಬಗ್ಗೆ ಮಾತನಾಡಲು ಗಂಗಾನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಿರಾಕರಿಸಿದರು. ಆದರೆ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ, ಇದನ್ನು ಕೊನೆಗೊಳಿಸುವುದಾಗಿ ಹೇಳುತ್ತಾರೆ.

                 ವ್ಯಸನ ವರ್ಜನ ಕೇಂದ್ರಕ್ಕೆ ಬರುವವರಲ್ಲಿ ಹೆಚ್ಚಿನವರು ಗಂಗಾನಗರ ಹಾಗೂ ಹನುಮಾನ್‌ಗಢ ಜಿಲ್ಲೆಗೆ ಸೇರಿದವರು. ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಪ್ರದೇಶಕ್ಕೆ ಸೇರಿದವರು ಎಂದು ವೈದ್ಯ ಮನೀಶ್ ಬಾಗ್ಲಾ ಹೇಳುತ್ತಾರೆ. 'ಹಿಂದೆ ನಮ್ಮಲ್ಲಿಗೆ ಬರುವವರು ಅಫೀಮು ಸೇವಿಸುವವರಾಗಿದ್ದರು. ಈಗ ಹೆಚ್ಚಿನವರು ಹೆರಾಯಿನ್ ಸೇವಿಸುತ್ತಿದ್ದಾರೆ' ಎಂದು ಬಾಗ್ಲಾ ಹೇಳುತ್ತಾರೆ.

              ಗಡಿಯಾಚೆಯಿಂದ ಮಾದಕ ವಸ್ತುಗಳ ಕಳ್ಳಸಾಗಣೆ ನಡೆಯುವುದನ್ನು ತಡೆಯಲು ಗಡಿ ಭದ್ರತಾ ಪಡೆ ಜೊತೆಗೂಡಿ ಕೆಲಸ ಮಾಡಲಾಗುತ್ತಿದೆ, ಪಂಜಾಬ್ ಪೊಲೀಸರ ಜೊತೆಯೂ ಸಮನ್ವಯದಿಂದ ಕೆಲಸ ಮಾಡಲಾಗುತ್ತಿದೆ. ಔಷಧ ಅಂಗಡಿಗಳಲ್ಲಿ ಯಾವ ಬಗೆಯ ಔಷಧಗಳನ್ನು ಮಾರಲಾಗುತ್ತಿದೆ ಎಂಬ ಬಗ್ಗೆ ತಪಾಸಣೆ ನಡೆಸಲಾಗುತ್ತಿರುತ್ತದೆ ಎಂದು ಗಂಗಾನಗರ ಎಸ್‌ಪಿ ವಿಕಾಸ್ ಶರ್ಮ ಹೇಳುತ್ತಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries