ಎರ್ನಾಕುಳಂ: ಕಲಮಸ್ಸೆರಿ ಸ್ಫೋಟ ಪ್ರಕರಣದ ಆರೋಪಿ ಮಾರ್ಟಿನ್‍ನ ವಿದೇಶಿ ಸಂಪರ್ಕವನ್ನು ಪೋಲೀಸರು ಪರಿಶೀಲಿಸಲಿದ್ದಾರೆ. 15 ವರ್ಷಗಳಿಂದ ನಿರಂತರವಾಗಿ ದುಬೈನಲ್ಲಿರುವ ಮಾರ್ಟಿನ್ ಬೇರೆ ಯಾವುದೇ ದೇಶಗಳಿಗೆ ಪ್ರವಾಸ ಮಾಡಿ ಹಣಕಾಸು ವ್ಯವಹಾರ ನಡೆಸಿರುವನೇ ಎಂದು ಪರಿಶೀಲಿಸಲಾಗುವುದು.ಅಲ್ಲದೆ ಗುರುತಿನ ಪರೇಡ್‍ಗೆ ಒಳಪಡಿಸಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.
ಮಾರ್ಟಿನ್ ಬಳಸುವ ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಲಾಗುತ್ತದೆ. ಸದ್ಯ ಆರೋಪಿಯ ಮೊಬೈಲ್ ಪೋನ್ ಅನ್ನು ವಿಧಿವಿಜ್ಞಾನ ತಂಡ ಪರಿಶೀಲನೆ ನಡೆಸುತ್ತಿದೆ. ಮಾರ್ಟಿನ್ ದಾಳಿಯ ಪ್ರಮುಖ ಸೂತ್ರಧಾರನಾಗಿದ್ದು, ಆತನೇ ಬಾಂಬ್ ತಯಾರಿಸಿದ್ದಾನೆ ಎಂದು ಪೋಲೀಸರು ನಿನ್ನೆ ನ್ಯಾಯಾಲಯದಲ್ಲಿ ಸ್ಪಷ್ಟಪಡಿಸಿದ್ದಾರೆ. ಮಾರ್ಟಿನ್ ಗುರುತಿನ ಪರೇಡ್ ಗೆ ಕೋರ್ಟ್ ಅನುಮತಿ ನೀಡಿದೆ.
ಕೇರಳದ ಕಲಮಸ್ಸೆರಿ ಯೆಹೋವನ ಸಾಕ್ಷಿಗಳ ಸಮಾವೇಶದಲ್ಲಿ ನಡೆದ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮಲಯತ್ತೂರಿನ ಲಿಬಿನಾ (12), ಎರ್ನಾಕುಳಂನ ಲಿಯೋನಾ ಪೌಲಸ್ (60) ಮತ್ತು ತೊಡುಪುಳದ ಕುಮಾರಿ (53) ಮೃತಪಟ್ಟವರು. ಸ್ಫೋಟದಲ್ಲಿ ಗಾಯಗೊಂಡಿರುವ ಸುಮಾರು 25 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.