ಕಾಸರಗೋಡು: ನಗರದ ಮಾರ್ಕೆಟ್ ರಸ್ತೆ ಬಳಿ ಪೈಪ್ ಅಳವಡಿಸಲು ಅಗೆಯುವ ಮಧ್ಯೆ ಆವರಣ ಗೋಡೆ ಕುಸಿದು ಬಿದ್ದು, ಇಬ್ಬರು ಅತಿಥಿ ಕಾರ್ಮಿಕರು ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ತರೀಕೆರೆ ನಿವಾಸಿ ಬಿ.ಎಂ ಬಸಯ್ಯ(40) ಹಾಗೂ ಕೊಪ್ಪಳ ಜಿಲ್ಲೆ ಇಟಗಿ ನಿಂಗಾಪುರ್ ನಿವಾಸಿ ಲಕ್ಷ್ಮಣಪ್ಪ(42)ಮೃತಪಟ್ಟವರು.
ಮಂಗಳವಾರ ಸಂಜೆ ಮಾರ್ಕೆಟ್ ಸನಿಹ ಪೈಪ್ ಅಳವಡಿಸಲು ಹೊಂಡ ಅಗೆಯುತ್ತಿರುವ ಮಧ್ಯೆ, ಸನಿಹದ ಕೆಂಪುಕಲ್ಲಿನ ಆವರಣಗೋಡೆ ಏಕಾಏಕಿ ಕುಸಿದು, ಕಾರ್ಮಿಕರಿಬ್ಬರ ಮೇಲೆ ಬಿದ್ದಿದೆ. ತಕ್ಷಣ ಸ್ಥಳದಲ್ಲಿದ್ದವರು ಕಾರ್ಯಾಚರಣೆ ನಡೆಸಿ, ಜನರಲ್ ಆಸ್ಪತ್ರೆಗೆ ಸಾಗಿಸಿದರೂ, ಪ್ರಯೋಜನವಾಗಿರಲಿಲ್ಲ. ಮೃತದೇಹಗಳನ್ನು ಜನರಲ್ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ.
ಕಾಸರಗೋಡು ಸಿ.ಐ. ಪಿ. ಅಜಿತ್ ಕುಮಾರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆಯಲ್ಲಿ ಸಹಕರಿಸಿತು. ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.