ಕಾಸರಗೋಡು: ಪೊಲೀಸರು ನಿರಂತರ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಕಾಸರಗೋಡು ನಗರದಲ್ಲಿ ಖಾಸಗಿ ಬಸ್ ಸಿಬ್ಬಂದಿ ಮಿಂಚಿನ ಮುಷ್ಕರ ನಡೆಸಿದ ಪರಿಣಾಮ ತಾಸುಗಳ ಕಾಲ ಪ್ರಯಾಣಿಕರು ಪರದಾಡಬೇಕಾಯಿತು.
ಕಾಸರಗೋಡು ನಗರದಲ್ಲಿ ಹೆದ್ದಾರಿ ಷಟ್ಪಥ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಸಂಚಾರ ವಯವಸ್ಥೆಯಲ್ಲಿ ನಿರಂತರ ಅಡಚಣೆಯುಂಟಾಗುತ್ತಿದೆ. ಇದಕ್ಕೆ ಖಾಸಗಿ ಬಸ್ ಸಿಬ್ಬಂದಿಯನ್ನು ಹೊಣೆಗಾರರನ್ನಾಗಿಸಿ ಕಾಸರಗೋಡು ರೈಲ್ವೆ ನಿಲ್ದಾಣ ಬಳಿ ಡಿವೈಎಸ್‍ಪಿ ಬಸ್ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್ ಸಿಬ್ಬಂದಿಮಿಂಚಿನ ಮುಷ್ಕರ ಹೂಡಿದ್ದರು. ನಗರದಲ್ಲಿ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಬಸ್ ಸಂಚಾರದ ಸಮಯವನ್ನು ಪಾಲಿಸಲು ಸಾದ್ಯವಾಗುತ್ತಿಲ್ಲ. ಇದರ ಹೊಣೆಯನ್ನು ಬಸ್ ಸಿಬ್ಬಂದಿ ಮೇಲೆ ಹೊರಿಸುವುದು ಸರಿಯಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ. ನಂತರ ನಗರ ಠಾಣೆ ಎಸ್.ಐಪಿ. ಅಜಿತ್ ಕುಮಾರ್ ನೇತೃತ್ವದಲ್ಲಿ ಬಸ್ ಸಿಬ್ಬಂದಿ ಜತೆ ಮಾತುಕತೆ ನಡೆಸಿದ ಪರಿಣಾಮ ಮುಷ್ಕರ ಕೊನೆಗೊಳಿಸಲು ತೀರ್ಮಾನಿಸಲಾಗಿತ್ತು. ನಂತರ ಎಂದಿನಂತೆ ಬಸ್ ಸಂಚಾರ ಪುನಾರಂಭಗೊಮಡಿತ್ತು.