ನವದೆಹಲಿ: ಶಬರಿಮಲೆಯ ಅರವಣ ಪ್ರಸಾದದಲ್ಲಿ ಕ್ರಿಮಿನಾಶಕಗಳ ಕುರುಹು ಪತ್ತೆಯಾದ ಹಿನ್ನೆಲೆಯಲ್ಲಿ ಏಲಕ್ಕಿಯಿಂದ ಮಾಡಿದ ಅರವಣವನ್ನು ನಾಶಪಡಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಈ ಬಗ್ಗೆ ಸರ್ಕಾರ ಮತ್ತು ದೇವಸ್ವಂ ಮಂಡಳಿ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಜನವರಿಯಿಂದ ಶಬರಿಮಲೆಯಲ್ಲಿ ರಾಶಿ ಹಾಕಲಾಗಿದ್ದ 6 ಲಕ್ಷಕ್ಕೂ ಹೆಚ್ಚು ಡಬ್ಬ ಅರವಣ ಪ್ರಸಾದಗಳನ್ನು ನಾಶ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅರವಣ ತಯಾರಿಸಲು ಬಳಸುವ ಏಲಕ್ಕಿಯಲ್ಲಿ ಕೀಟನಾಶಕ ಇರುವುದು ಪತ್ತೆಯಾಗಿದೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಅರವಣ ನಾಶ ಮಾಡುವಂತೆ ಆದೇಶ ನೀಡಿದೆ. ಅರವಣವನ್ನು ನಾಶಪಡಿಸುವ ಸ್ಥಳವನ್ನು ಸರ್ಕಾರ ಮತ್ತು ದೇವಸ್ವಂ ಮಂಡಳಿ ನಿರ್ಧರಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದೇ ವೇಳೆ, ಅರವಣ ಮಾರಾಟವನ್ನು ತಡೆದಿದ್ದಕ್ಕಾಗಿ ಕೇರಳ ಹೈಕೋರ್ಟ್ ಅನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಟೀಕಿಸಿತು. ಏಲಕ್ಕಿಯಲ್ಲಿ ಕೀಟನಾಶಕಗಳಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಅರವಣ ಮಾರಾಟವನ್ನು ನಿಷೇಧಿಸಿತ್ತು. ಆದರೆ ಕೀಟನಾಶಕಗಳ ಉಪಸ್ಥಿತಿಯನ್ನು ಪರೀಕ್ಷಿಸಿದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಅರವಣ ಖಾದ್ಯ ಎಂದು ವರದಿಯನ್ನು ನೀಡಿತ್ತು. ಅರವಣವನ್ನು ತಯಾರಿಸಿ ತಿಂಗಳ ನಂತರ ಭಕ್ತರಿಗೆ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಮಂಡಳಿ ನ್ಯಾಯಾಲಯಕ್ಕೆ ತಿಳಿಸಿತ್ತು. ಈ ಪರಿಸ್ಥಿತಿಯಲ್ಲಿ ಸುಪ್ರೀಂ ಕೋರ್ಟ್ ಅರವಣನನ್ನು ನಾಶ ಮಾಡುವಂತೆ ಸೂಚನೆ ನೀಡಿದೆ.