ಭೋಪಾಲ್: ಗೌಪ್ಯತೆ ಉಲ್ಲಂಘಿಸಿದ್ದಕ್ಕೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಅಟೆರ್ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮರು ಮತದಾನಕ್ಕೆ ಭಾರತೀಯ ಚುನಾವಣಾ ಆಯೋಗವು ಆದೇಶಿಸಿದೆ. ನವೆಂಬರ್ 21 ರಂದು ಮರು ಮತದಾನ ನಡೆಯಲಿದೆ.
ಭೋಪಾಲ್: ಗೌಪ್ಯತೆ ಉಲ್ಲಂಘಿಸಿದ್ದಕ್ಕೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಅಟೆರ್ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮರು ಮತದಾನಕ್ಕೆ ಭಾರತೀಯ ಚುನಾವಣಾ ಆಯೋಗವು ಆದೇಶಿಸಿದೆ. ನವೆಂಬರ್ 21 ರಂದು ಮರು ಮತದಾನ ನಡೆಯಲಿದೆ.
ನವೆಂಬರ್ 17ರಂದು ನಡೆದ ಮತದಾನದ ವೇಳೆ ಮತದಾರರು ಫೋಟೊ ಹಾಗೂ ವಿಡಿಯೊ ಚಿತ್ರೀಕರಣ ಮಾಡಿದ್ದರಿಂದ ಗೌಪ‍್ಯತೆಯ ಉಲ್ಲಂಘನೆಯಾಗಿದೆ. ಹೀಗಾಗಿ ಮರು ಮತದಾನಕ್ಕೆ ಆದೇಶಿಸಲಾಗಿದೆ.
ಗೌಪ್ಯತೆಯ ಉಲ್ಲಂಘನೆ ಮಾಡಿದ ಪ್ರಕರಣ ಸಂಬಂಧ 4 ಮತಗಟ್ಟೆ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ರಿಟರ್ನಿಂಗ್ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸಂಜೀವ್ ಶ್ರೀವತ್ಸ ತಿಳಿಸಿದ್ದಾರೆ.
ಕೃಷ್ಣಪುರದ 71ನೇ ಸಂಖ್ಯೆಯ ಮೂರು ಮತಗಟ್ಟೆಗಳಲ್ಲಿ ಮಂಗಳವಾರ ಬೆಳಿಗ್ಗೆ 7 ರಿಂದ ಸಂಜೆ 6ರವರೆಗೆ ಮರು ಮತದಾನ ನಡೆಯಲಿದೆ. ಮತದಾರರ ಮಧ್ಯದ ಬೆರಳಿಗೆ ಅಳಿಸಲಾಗದ ಶಾಹಿ ಹಚ್ಚಲಾಗುತ್ತದೆ ಎಂದು ರಿಟರ್ನಿಂಗ್ ಅಧಿಕಾರಿ ತಿಳಿಸಿದ್ದಾರೆ.
ಮರು ಮತದಾನದ ವೇಳೆ ಮತಗಟ್ಟೆಗೆ ಮೊಬೈಲ್ ತೆಗೆದುಕೊಂಡು ಹೋಗುವುದು ನಿಷೇಧಿಸಲಾಗಿದೆ. ಉಳಿದಂತೆ ನೀತಿ ಸಂಹಿತೆಯ ಎಲ್ಲಾ ನಿಯಮಗಳು ಜಾರಿಯಲ್ಲಿರಲಿವೆ. ಮರು ಮತದಾನ ಪ್ರಕ್ರಿಯೆಗಳನ್ನು ವಿಡಿಯೊ ಚಿತ್ರೀಕರಣ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.