ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾದ ಪ್ರೀಕ್ವೆಲ್ (ಹಿಂದಿನ ಕಥೆ)ನ ಫಸ್ಟ್ ಲುಕ್ ಇದೇ 27 ರಂದು ಬಿಡುಗಡೆಯಾಗಲಿದೆ. ಮೊದಲ ಭಾಗದಂತೆಯೇ, ಎರಡನೇ ಭಾಗವನ್ನು ಸಹ ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಲಿದ್ದಾರೆ, ಅವರು ಪ್ರಮುಖ ಪಾತ್ರದಲ್ಲಿ ನಟಿಸುವ ನಿರೀಕ್ಷೆಯಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನ ವಿಜಯ್ ಕಿರಂಗಂದೂರು ನಿರ್ಮಿಸಿರುವ ಈ ಸೀಕ್ವೆಲ್ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್‌ನಲ್ಲಿ ಬಿಡುಗಡೆಯಾಗಲಿದೆ.
ಟ್ವಿಟ್ಟರ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್, ‘ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವುದರ ಜತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸಿ. ಹಿಂದೆಂದಿಗೂ ನೋಡಿರದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿ. ಇದು ಬರಿ ಬೆಳಕಲ್ಲ, ದರ್ಶನ’ ಎಂದು ಹೇಳಿದೆ.
ನಟ ರಿಷಬ್ ಶೆಟ್ಟಿ ಅವರ ಸಿನಿಪಯಣದ ದಿಕ್ಕನ್ನು ಬದಲಿಸಿದ ಸಿನಿಮಾ ಕಾಂತಾರ. ವಿಶ್ವವ್ಯಾಪಿ ಪ್ರೇಕ್ಷಕರ ಮನಗೆಲ್ಲುವುದರೊಂದಿಗೆ, ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಹಣವನ್ನೂ ಬಾಚಿತ್ತು. ಇದೀಗ ಈ ಸಿನಿಮಾದ ಪ್ರೀಕ್ವೆಲ್ (ಹಿಂದಿನ ಕಥೆ) ತೆರೆಯ ಮೇಲೆ ಬರಲಿದ್ದು, ಪ್ರೇಕ್ಷಕರಲ್ಲಿ ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ.
ಪ್ರೀಕ್ವೆಲ್ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಟ ರಿಷಬ್ ಶೆಟ್ಟಿ, ‘ನಾನು ವೈಯಕ್ತಿಕವಾಗಿ ಪ್ರೀಕ್ವೆಲ್‌ಗೆ ಹೇಗೆ ಸಿದ್ಧವಾಗುತ್ತಿದ್ದೇನೆ ಎನ್ನುವುದನ್ನು ಮೇಕಿಂಗ್ ಮೂಲಕವೇ ತಿಳಿಸುತ್ತೇನೆ. ಮೊದಲ ಭಾಗವು ಎಷ್ಟು ಸಮಯದ ಮಿತಿಯನ್ನು ಬಯಸಿತ್ತೋ, ಅಷ್ಟೇ ಸಮಯದಲ್ಲಿ ಅದರ ಚಿತ್ರೀಕರಣ ಮುಗಿಸಿದ್ದೆವು. ಪ್ರೀಕ್ವೆಲ್ ಕಥೆಯ ಬೇಡಿಕೆ ಏನಿರುತ್ತದೆಯೋ ಅಷ್ಟೇ ಸಮಯವನ್ನು ಅದಕ್ಕೆ ನೀಡುತ್ತೇವೆ’ ಎಂದು ಹೇಳಿದ್ದರು.
ದೊಡ್ಡ ಬಜೆಟ್‌ನಲ್ಲಿ ಚಿತ್ರ ತಯಾರಾಗಲಿದೆ, ಕಾಂತಾರ ಮೊದಲ ಭಾಗದ ಕೆಲವು ನಟರು ತಮ್ಮ ಪಾತ್ರಗಳನ್ನು ಪುನರಾವರ್ತಿಸುತ್ತಿದ್ದಾರೆ ಎಂದು ರಿಷಬ್ ಪ್ರಸ್ತಾಪಿಸಿದ್ದಾರೆ. ಈ ಬಹುನಿರೀಕ್ಷಿತ ಪ್ಯಾನ್-ಇಂಡಿಯನ್ ಯೋಜನೆಗೆ ಸೇರ್ಪಡೆಗೊಳ್ಳುವ ಹೊಸ ಹೆಸರುಗಳನ್ನು ಕಾದು ನೋಡಬೇಕಾಗಿದೆ. ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಪ್ರಸಾದ್ ತುಮಿನಾಡ್, ಸ್ವರಾಜ್ ಶೆಟ್ಟಿ, ಮತ್ತು ಮಾನಸಿ ಸುಧೀರ್ ಮುಂತಾದವರು ಮೊದಲ ಭಾಗದಲ್ಲಿ ನಟಿಸಿದ್ದಾರೆ.
.