ತ್ರಿಶೂರ್: ಪ್ರಮುಖ ಶಾಲೆಯೊಂದರಲ್ಲಿ ಯುವಕನೊಬ್ಬ ಬಂದೂಕಿನಿಂದ ಗುಂಡು ಹಾರಿಸಿ ಭಯದ ವಾತಾವರಣ ಸೃಷ್ಟಿಸಿದ ಘಟನೆ ನಡೆದಿದೆ. ತ್ರಿಶೂರ್ ವಿವೇಕೋದಯಂ ಶಾಲೆಯಲ್ಲಿ ಈ ಘಟನೆ ಇಂದು ನಡೆದಿದೆ.
ಮುಳಯಂ ಮೂಲದ ಜಗನ್ ಎಂಬಾತ ಬಂದೂಕುಧಾರಿಯಾಗಿ ಶಾಲೆಗೆ ಆಗಮಿಸಿದ್ದ. ಈತ ಇದೇ ಶಾಲೆಯ ಹಳೆ ವಿದ್ಯಾರ್ಥಿ ಎಂದು ಹೇಳಲಾಗಿದೆ.
ತರಗತಿಗೆ ನುಗ್ಗಿ ಮೂರು ಬಾರಿ ಗುಂಡು ಹಾರಿಸಿದ ಯುವಕ ಸ್ಟಾಫ್ ರೂಮಿಗೆ ನುಗ್ಗಿ ಶಿಕ್ಷಕರಿಗೆ ಬೆದರಿಕೆ ಹಾಕಿದ್ದಾನೆ ಎಂದು ಶಿಕ್ಷಕರು ಹೇಳುತ್ತಾರೆ. ನಂತರ ಆತನನ್ನು ಶಾಲೆಯ ಅಧಿಕಾರಿಗಳು ಮತ್ತು ಸ್ಥಳೀಯರು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ. ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.
ಶಾಲೆಯ ಕೆಲ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಯುವಕ ಅಲ್ಲಿಗೆ ಬಂದಿದ್ದ ಎಂದು ಶಿಕ್ಷಕರು ಹೇಳುತ್ತಾರೆ. ತ್ರಿಶೂರ್ ಈಸ್ಟ್ ಪೋಲೀಸರು ತನಿಖೆ ಆರಂಭಿಸಿದ್ದಾರೆ. ಯುವಕ ಮಾದಕ ವ್ಯಸನಿಯಾಗಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ, ಈತನಲ್ಲಿದ್ದ ಏರ್ ಗನ್ ವಶಪಡಿಸಿಕೊಳ್ಳಲಾಗಿದೆ ಎಂದು ದೃಢಪಡಿಸಲಾಗಿದೆ.