ಉಪ್ಪಳ: ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶನಿವಾರ ಅಪರಾಹ್ನ ನಡೆದ ಮಂಜೇಶ್ವರ ಕ್ಷೇತ್ರದ ನವಕೇರಳ ಸಮಾವೇಶದ ಅಂಗವಾಗಿ ಸ್ಥಾಪಿಸಲಾದ ದೂರು ಸ್ವೀಕಾರ ಕೌಂಟರ್‍ಗಳಲ್ಲಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲಾಯಿತು. ಸುಮಾರು ಎರಡು ಸಾವಿರ ದೂರುಗಳು ಈ ಸಂದರ್ಭ ಲಭ್ಯವಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ನವಕೇರಳ ಸಮಾವೇಶದ ಆರಂಭಕ್ಕೂ ಮುನ್ನವೇ ಕೌಂಟರ್ ಗಳು ಕಾರ್ಯಾರಂಭ ಮಾಡಿದ್ದವು. ಮಹಿಳೆಯರು, ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ದೂರು ಸಲ್ಲಿಸಲು ವಿಶೇಷ ಸೌಲಭ್ಯ ಕಲ್ಪಿಸಲಾಗಿತ್ತು.
ಗೋವಿಂದ ಪೈ ಸ್ಮಾರಕ ಟ್ರಸ್ಟ್‍ನ ಕಾರ್ಯದರ್ಶಿ ಎಂ. ಉಮೇಶ್ ಸಾಲಿಯಾನ್ ಮತ್ತು ಕೋಶಾಧಿಕಾರಿ ಬಾಲಕೃಷ್ಣ ಶೆಟ್ಟಿ ಅವರು ಬರೆದ ಮನವಿಯೊಂದರಲ್ಲಿ ರಾಷ್ಟ್ರಕವಿ ಗೋವಿಂದ ಪೈ ಅವರ ಅತ್ಯುತ್ತಮ ಕೃತಿಗಳನ್ನು ಕನ್ನಡ ಪಠ್ಯಪುಸ್ತಕದಲ್ಲಿ ಸೇರಿಸಬೇಕು, ಕಾಲೇಜು ವಿದ್ಯಾರ್ಥಿಗಳಿಗೆ ರಾಷ್ಟ್ರಕವಿ ಗೋವಿಂದ ಪೈ ಅವರ ಸ್ಮಾರಕವಾದ ಗಿಳಿವಿಂಡುವಿನಲ್ಲಿ ಸಂಶೋಧನಾ ಸೌಲಭ್ಯ ಕಲ್ಪಿಸಬೇಕು ಹಾಗೂ ಜಿಲ್ಲಾ ಪಂಚಾಯಿತಿ ಅನುದಾನ ನೀಡಬೇಕು ಎಂದು ಒತ್ತಾಯಿಸಿರುವರು. ಗಿಳಿವಿಂಡು ಅಭಿವೃದ್ಧಿಗೆ ಸ್ಥಳೀಯಾಡಳಿತ ಸಂಸ್ಥೆಗಳನ್ನು ಬಳಸಿಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಸ್ಥಳೀಯ ರಸ್ತೆ ಅಭಿವೃದ್ಧಿ, ಲೈಫ್ ಮಿಷನ್ ವಸತಿ ಯೋಜನೆ, ವಿವಿಧ ಕಲ್ಯಾಣ ಯೋಜನೆಗಳ ಅರ್ಜಿಗಳು, ಜಮೀನು ಸಮಸ್ಯೆ ಸೇರಿದಂತೆ ಸಾಮಾನ್ಯ ದೂರುಗಳನ್ನು ಸ್ವೀಕರಿಸಲಾಯಿತು.
ದೂರುಗಳನ್ನು ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ಪೋರ್ಟಲ್ ಮೂಲಕ ನೀಡಲಾಗುವುದು. ಒಂದು ವಾರದಿಂದ ಒಂದೂವರೆ ತಿಂಗಳೊಳಗೆ ದೂರುಗಳನ್ನು ಪರಿಹರಿಸಲಾಗುವುದು. ದೂರು ಸ್ವೀಕರಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು ಎರಡು ವಾರಗಳಲ್ಲಿ ದೂರನ್ನು ಪರಿಹರಿಸಿ ವಿವರವಾದ ಉತ್ತರವನ್ನು ಅಪ್‍ಲೋಡ್ ಮಾಡುತ್ತಾರೆ. ಮುಂದಿನ ಕ್ರಮದ ಅಗತ್ಯವಿರುವ ದೂರುಗಳನ್ನು ಗರಿಷ್ಠ ನಾಲ್ಕು ವಾರಗಳಲ್ಲಿ ಪರಿಹರಿಸಲಾಗುವುದು ಎಂದು ತಿಳಿಸಲಾಗಿದೆ.