ನವದೆಹಲಿ: ಚುನಾವಣೆ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳು ಹಣ ಸ್ವೀಕರಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಾಪಾಡುವುದನ್ನು ಮುಂದುವರಿಸಬೇಕು. ಈ ಕುರಿತು 2019ರಲ್ಲಿ ನೀಡಿದ್ದ ಮಧ್ಯಂತರ ಆದೇಶ ಸೀಮಿತ ಅವಧಿಗೆ ಮಾತ್ರ ಅನ್ವಯವಾಗುವುದಿಲ್ಲ ಎಂದು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ಚುನಾವಣಾ ಬಾಂಡ್ ಯೋಜನೆ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ಸದಸ್ಯರ ಸಂವಿಧಾನ ಪೀಠ ನಡೆಸಿತು.
'ಮಧ್ಯಂತರ ಆದೇಶದ ಅನುಸಾರ ಸಲ್ಲಿಸಿರುವ ದತ್ತಾಂಶದ ವಿವರಗಳು ನಿಮ್ಮ ಬಳಿ ಇವೆಯೇ' ಎಂದು ಚುನಾವಣಾ ಪರ ಹಾಜರಿದ್ದ ವಕೀಲ ಅಮಿತ್ ಶರ್ಮಾ ಅವರನ್ನು ನ್ಯಾಯಪೀಠ ಪ್ರಶ್ನಿಸಿತು.
'ವಿಷಯಕ್ಕೆ ಸಂಬಂಧಿಸಿ 2019ರಲ್ಲಿ ಸಲ್ಲಿಸಿದ್ದ ಮುಚ್ಚಿದ ಲಕೋಟೆ ಮಾತ್ರ ನಮ್ಮ ಬಳಿ ಇದೆ' ಎಂದು ವಕೀಲ ಶರ್ಮಾ ಪ್ರತಿಕ್ರಿಯಿಸಿದರು.
ಆಗ, 'ಲಕೋಟೆಯನ್ನು ಕಾದಿಡಿ. ಸೂಕ್ತ ಸಮಯದಲ್ಲಿ ಅದರಲ್ಲಿರುವ ದಾಖಲೆಗಳನ್ನು ಪರಿಶೀಲಿಸಲಾಗುವುದು' ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್.ಗವಾಯಿ, ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರೂ ಇದ್ದ ನ್ಯಾಯಪೀಠ ಶರ್ಮಾ ಅವರಿಗೆ ಹೇಳಿತು.
ಈ ವಿಚಾರವಾಗಿ ಅರ್ಜಿ ಸಲ್ಲಿಸಿರುವ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಎಂಬ ಎನ್‌ಜಿಒ ಪರ ಹಾಜರಿದ್ದ ವಕೀಲ ಪ್ರಶಾಂತ ಭೂಷಣ್, 'ಮಧ್ಯಂತರ ಆದೇಶವು ನಿರಂತರವಾಗಿ ಅನ್ವಯವಾಗುತ್ತದೆ. ರಾಜಕೀಯ ಪಕ್ಷಗಳು ಸ್ವೀಕರಿಸಿದ ಹಣ ಕುರಿತ ಮಾಹಿತಿಯನ್ನು ಸಂಗ್ರಹಿಸುವುದನ್ನು ಮುಂದುವರಿಸಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟಪಡಿಸಿದೆ' ಎಂದರು.
ಅರ್ಜಿದಾರರೊಬ್ಬರ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, 'ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಸ್ವೀಕರಿಸುವುದು ಚುನಾವಣೆಗಳು ಅಥವಾ ಚುನಾವಣಾ ಪ್ರಕ್ರಿಯೆಗೆ ಮಾತ್ರ ಸೀಮಿತವಾಗಿಲ್ಲ ಎಂದರು.