ಕಾಸರಗೋಡು: ರಾಜ್ಯ ಸರಕಾರ ಜಾರಿಗೊಳಿಸಿರುವ ಜಾಗೃತ ಸಪ್ತಾಹದ ಅಂಗವಾಗಿ ಜಿಲ್ಲೆಯ ಗ್ರಾಮಾಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆಯ ವಿವಿಧ ಹುದ್ದೆಗಳ ನೌಕರರಿಗೆ ವಿಜಿಲೆನ್ಸ್ ಜಾಗೃತಿ ತರಗತಿ ಕಾಸರಗೋಡಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು.
ವಿಜಿಲೆನ್ಸ್ ಎಸ್ಪಿ ಇನ್ಸ್ ಪೆಕ್ಟರ್ ಸುನುಮೋನ್ ಕೇಶವನ್ ತರಗತಿ ನಡೆಸಿದರು. ಭ್ರಷ್ಟಾಚಾರಮುಕ್ತ ಕೇರಳದ ಗುರಿಯನ್ನು ಸಾಧಿಸಲು ಪ್ರತಿಯೊಬ್ಬ ಅಧಿಕಾರಿಯು ತನ್ನ ಜೀವನದಲ್ಲಿ ಪರಿಶುದ್ಧತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಅಂಶದ ಮಹತ್ವವನ್ನು ತರಗತಿಯಲ್ಲಿ ವಿವರಿಸಲಾಯಿತು. ಭ್ರಷ್ಟಾಚಾರವು ಇಂದು ದೇಶ ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿದ್ದು, ಇದರಿಂದ ಸರ್ಕಾರ ಜಾರಿಗೊಳಿಸುತ್ತಿರುವ ಕಲ್ಯಾಣ ಚಟುವಟಿಕೆಗಳು ವಿವಿಧ ಹಂತಗಳಲ್ಲಿ ಗುರಿ ಸಾಧಿಸಲಾಗದೆ ವಿಫಲವಾಗುತ್ತಿದೆ. ಕೆಲವು ಅಧಿಕಾರಿಗಳ ನಿರ್ಲಕ್ಷ್ಯ, ಅಪ್ರಾಮಾಣಿಕತೆ, ಭ್ರಷ್ಟಾಚಾರದಿಂದ ಇಡಿ ಸಮೂಹ ಇದಕ್ಕೆ ಬೆಲೆ ತೆರಬೇಕಾಗುತ್ತಿದೆ. ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಇಂತಹ ಭ್ರಷ್ಟ ಅಧಿಕಾರಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂಬುದಾಗಿ ಮಾಹಿತಿ ನೀಡಲಾಯಿತು. ಎಲ್ಲರಿಗೂ ಲಭ್ಯವಿರುವ ಮಾಸಿಕ ವೇತನದಲ್ಲಿ ಜೀವನ ನಿರ್ವಹಣೆಯ ಯೋಜನೆ, ಹೆಚ್ಚುವರಿ ಖರ್ಚುವೆಚ್ಚಗಳನ್ನು ಕಡಿಮೆ ಮಾಡುವ ಕುರಿತು ತರಗತಿಯಲ್ಲಿ ವಿವರಿಸಲಾಯಿತು. ವಿಜಿಲೆನ್ಸ್ ಡಿವೈ ಎಸ್ಪಿ ವಿ.ಕೆ.ವಿಶ್ವಂಭರನ್ ನಾಯರ್ ಉಪಸ್ಥಿತರಿದ್ದರು.