ಕಾಸರಗೋಡು: ವಿದೇಶದಲ್ಲಿ ಉದ್ಯೋಗದ ಭರವಸೆ ನೀಡಿ ಹಲವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿ ತಲೆಮರೆಸಿಕೊಂಡಿದ್ದ ಕಣ್ಣೂರು ಪಯ್ಯನ್ನೂರಿನ ವಲಿಯಪರಂಬ ನಿವಾಸಿ ವಿನಿಮೋಳ್ ಮ್ಯಾಥ್ಯೂ(58)ಎಂಬಾಕೆಯನ್ನು ಪಯ್ಯನ್ನೂರು ಒಳಿಕ್ಕಲ್ ಠಾಣೆ ಪೊಲೀಸರು ಉಪ್ಪಿನಂಗಡಿಯಿಂದ ಬಂಧಿಸಿದ್ದಾರೆ.
ತಲಶ್ಯೇರಿ ಕೂಮಂಜೇರಿ ನಿವಾಸಿಯಾಗಿರು ಈಕೆ ಕಣ್ಣೂರು ವಲಯಪರಂಬದಲ್ಲಿ ವಾಸ್ತವ್ಯ ಹೂಡಿ, ಕೆನಡಾದಲ್ಲಿ ಉದ್ಯೋಗದ ವಿಸಾ ಕೊಡಿಸುವ ಭರವಸೆಯೊಂದಿಗೆ ಹಣ ವಸೂಲಿ ಮಾಡುತ್ತಿದ್ದಳು. ಒಳಿಕ್ಕಲ್ ಕೂಮಂತೋಟ್ ನಿವಾಸಿ ಆಶಿದಾಜಾನ್ ಎಂಬವರಿಂದ 14ಲಕ್ಷ ರೂ. ಹಾಗೂ ಅರಳಂ ನಿವಾಸಿ ಚಾಕೋ ಎಂಬವರಿಂದ 13ಲಕ್ಷ ರೂ. ಪಡೆದು, ನಂತರ ತಲೆಮರೆಸಿಕೊಂಡಿರುವ ಬಗ್ಗೆ ಪೊಲೀಸರಿಗೆ ನೀಡಿದ ದೂರಿನನ್ವಯ ಕೇಸು ದಾಖಲಿಸಿಕೊಂಡಿದ್ದರು. ಈಕೆ ಉಪ್ಪಿನಂಗಡಿಯಲ್ಲಿರುವ ಬಗ್ಗೆ ಒಳಿಕ್ಕಲ್ ಠಾಣೆ ಇನ್ಸ್‍ಪೆಕ್ಟರ್ ಕೆ. ಸಉಧೀರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಈಕೆಯನ್ನು ವಶಕ್ಕೆ ತೆಗೆದುಕೊಂಡಿದೆ.