ಉಪ್ಪಳ: ಉಡುಪಿಯ ಶ್ರೀಕೃಷ್ಣ ಪೂಜಾಪರ್ಯಾಯ ಪೀಠಾರೋಹಣ ಅಂಗವಾಗಿ ಶ್ರೀಪುತ್ತಿಗೆ ಮಠದ ಕಿರಿಯ ಯತಿಗಳಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದಂಗಳವರು ಮಂಗಳವಾರ ತಮ್ಮ ಪಟ್ಟದ ದೇವರ ಸಹಿತವಾಗಿ ಕೊಂಡೆವೂರು ಮಠಕ್ಕೆ ಚಿತ್ತೈಸಿ ಮೊಕ್ಕಾಂ ಹೂಡಿದರು. ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಗಳವರು ಭಕ್ತವೃಂದದೊಡನೆ ಪೂಜ್ಯರನ್ನು ಪೂರ್ಣಕುಂಭದೊಡನೆ ಸ್ವಾಗತಿಸಿದರು.
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಪೂಜ್ಯ ಪುತ್ತಿಗೆ ಶ್ರೀಗಳು, ಪೂಜ್ಯ ಕೊಂಡೆವೂರು ಶ್ರೀಗಳು, ಶ್ರೀ ಕ್ಷೇತ್ರ ಕಟೀಲಿನ ಬ್ರಹ್ಮಶ್ರೀ ಅನಂತಪದ್ಮನಾಭ ಆಸ್ರಣ್ಣರು ಮತ್ತು ಉದ್ಯಮಿ ಶಶಿಧರ ಶೆಟ್ಟಿ ಗ್ರಾಮಚಾವಡಿ ಉಪಸ್ಥಿತರಿದ್ದರು. ಪೂಜ್ಯ ಆಸ್ರಣ್ಣರು ಧರ್ಮಭೂಮಿ ಭಾರತಕ್ಕಿಂತ ದೊಡ್ಡ ದೇಶ ಜಗತ್ತಲ್ಲಿ ಇಲ್ಲ, ಇಲ್ಲಿ ಜನಿಸಿದ ನಾವು ಧನ್ಯರು ಎಂದು ಶ್ರೀಕೃಷ್ಣ ಪೂಜಾಪರ್ಯಾಯದ ವಿವರವನ್ನು ನೀಡಿದರು.
ಪೂಜ್ಯ ಕೊಂಡೆವೂರು ಶ್ರೀಗಳು ಪುತ್ತಿಗೆ ಶ್ರೀಗಳವರಿಗೆ ಪೌರಾಭಿನಂದನೆ ಸಲ್ಲಿಸಿದರು. ಬಳಿಕ ಪುತ್ತಿಗೆ ಶ್ರೀಗಳು ಆಶೀರ್ವಚನ ನೀಡಿ, ಕೊಂಡೆವೂರಿಗೆ ಬರಲು ನಮಗೆ ಸಂತಸ, ಹೆಮ್ಮೆಯಾಗುತ್ತಿದೆ, ಎಂದರಲ್ಲದೆ ಭಗವಾನ್ ಶ್ರೀಕೃಷ್ಣ ಪ್ರಣೀತ ಭಗವದ್ಗೀತೆಯ ಮಹತ್ವವನ್ನು ಹೇಳಿ ಆಗಮಿಸಿದ ಎಲ್ಲರೂ ಕೋಟಿಗೀತಾ ಲೇಖನ ಯಜ್ಞದಲ್ಲಿ ಪಾಲ್ಗೊಳ್ಳುವುದರ ಜೊತೆ ಪರ್ಯಾಯ ಮಹೋತ್ಸವಕ್ಕೆ ಸಮಸ್ತರನ್ನೂ ಆಮಂತ್ರಿಸಿದರು. ಕೊಂಡೆವೂರು ಶ್ರೀಗಳು ಆಶೀರ್ವಚನ ನೀಡಿ, ಜಗತ್ತಿನ ದೇವರಕೋಣೆಯಂತಿರುವ ಈ ಪುಣ್ಯಭೂಮಿ ಭಾರತದ ನಮ್ಮಲ್ಲಿ ಭಕ್ತಿ ಜಾಗೃತಿಯಾಗಿರಲಿ, ನಾವು ಶ್ರೀಕೃಷ್ಣನ ಸೇವೆ ಮಾಡುವುದರ ಜೊತೆಗೆ ಅವನ ಮುಖಾರವಿಂದಗಳಿಂದ ಹರಿದ ಭಗವದ್ಗೀತೆಯೆಂಬ ಜ್ಞಾನಗಂಗೆಯನ್ನು ಅರ್ಚಿಸುವುದರ ಮೂಲಕ ಪುನೀತರಾಗೋಣ ಎಂದು ಕರೆ ನೀಡಿದರು.
ಮಂಜೇಶ್ವರ ತಾಲೂಕಿನ ಅನೇಕ ದೇವಾಲಯಗಳು, ಭಜನಾಮಂದಿರಗಳು, ಸಂಘಸಂಸ್ಥೆಗಳು ಪುತ್ತಿಗೆ ಶ್ರೀಗಳವರಿಗೆ ಗೌರವಾರ್ಪಣೆ ಸಲ್ಲಿಸಿದರು. ಕು.ಶ್ರಾವಣ್ಯ ಕೊಂಡೆವೂರು ಪ್ರಾರ್ಥನೆ ಹಾಡಿದರು. ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿದರು. ಗಂಗಾಧರ ಕೊಂಡೆವೂರು ನಿರೂಪಿಸಿದರು. ಹರೀಶ ಮಾಡ ನಿರ್ವಹಿಸಿದರು.
ಕಾರ್ಯಕ್ರಮದ ಬಳಿಕ ಶ್ರೀಗಳವರು ತೊಟ್ಟಿಲು ಪೂಜಾಸೇವೆ, ತುಳಸೀಪೂಜೆ ಮತ್ತು ಬುಧವಾರ ಬೆಳಿಗ್ಗೆ ತಮ್ಮ ಪಟ್ಟದ ದೇವರ ಪೂಜೆಗಳನ್ನು ಕೊಂಡೆವೂರು ಮಠದ ಮೊಕ್ಕಾಂನಲ್ಲಿ ನೆರವೇರಿಸಿದರು.