ಕಣ್ಣೂರು: ಕಣ್ಣೂರು ಆಸುಪಾಸು ಸೇನಾ ಧಿರಿಸನಲ್ಲಿ ನಕ್ಸಲರು ಕಾಣಿಸಿಕೊಂಡಿದ್ದು, ಇವರ ಪತ್ತೆಗಾಗಿ ಪೊಲೀಸರು ಮತ್ತು ತಂಡರ್ ಬೋಲ್ಟ್ ಪಡೆ ಕಾರ್ಯಾಚರಣೆ ಮುಂದುವರಿಸಿದೆ. ಕಣ್ಣೂರು ಜಿಲ್ಲೆಯ ಕೇಳಗಂ ಪ್ರಾಥಮಿಕ ಆರೋಗ್ಯ ಕೇಂದ್ರ ಸನಿಹದ ಬುಡಕಟ್ಟು ಜನಾಂಗದವರು ವಾಸಿಸುತ್ತಿರುವ ಪ್ರದೇಶದ ಅರಣ್ಯದಲ್ಲಿ ಭಾರತೀಯ ಸೇನೆಯ ಸಮವಸ್ತ್ರ ತೊಟ್ಟ ಐದು ಮಂದಿಯ ನಕ್ಸಲರ ತಂಡ ಅಡ್ಡಾಡುತ್ತಿರುವುದನ್ನು ಸ್ಥಳೀಯರು ಕಂಡಿದ್ದರು. ಕನ್ನಡ ಮತ್ತು ತಮಿಳು ಮಿಶ್ರಿತ ಮಲಯಾಳದಲ್ಲಿ ಇವರು ಮಾತನಾಡುತ್ತಿದ್ದರೆನ್ನಲಾಗಿದೆ.
ಈ ಪ್ರದೇಶದ ವ್ಯಕ್ತಿ ಜತೆ ಮಾತನಾಡಿದ ನಕ್ಸಲನೊಬ್ಬ, ನಿಮ್ಮ ಮನೆಯಿಂದ ಸೇವಿಸಲು ಆಹಾರ ಪದಾರ್ಥ ಲಭಿಸಬಹುದೇ ಎಂದು ಕೇಳಿದ್ದು, ಆ ವ್ಯಕ್ತಿಯ ಮನೆ ಅಲ್ಲಿಂದ ಬಹಳಷ್ಟು ದೂರದಲ್ಲಿದ್ದ ಹಿನ್ನೆಲೆಯಲ್ಲಿ ಅಪಾಯ ಅರಿತ ನಕ್ಸಲರು ಅತ್ತ ತೆರಳದೆ, ಅಲ್ಲಿಂದ ನಿರ್ಗಮಿಸಿದ್ದರೆನ್ನಲಾಗಿದೆ. ಸ್ಥಳೀಯ ನಿವಾಸಿಗಳು ನೀಡಿದ ಮಾಹಿತಿಯನ್ವಯ ಸ್ಥಳೀಯ ಪೊಲೀಸರು ಹಾಗೂ ತಂಡರ್ ಬೋಲ್ಟ್ ಸಿಬ್ಬಂದಿ ಆಗಮಿಸಿ ಈ ಪ್ರದೇಶದಲ್ಲಿ ವ್ಯಾಪಕ ಕಾರ್ಯಾಚರಣೆ ನಡೆಸಿದ್ದರೂ, ನಕ್ಸಲರ ಪತ್ತೆ ಸಾಧ್ಯವಾಗಿಲ್ಲ. ಸ್ಥಳಕ್ಕಾಗಮಿಸಿದ ನಕ್ಸಲರು ಕೋವಿಗಳನ್ನು ಬಟ್ಟೆಯಿಂದ ಸುತ್ತಿಕೊಂಡಿದ್ದರೆನ್ನಲಾಗಿದೆ.
ಶಬರಿಮಲೆ ಮಂಡಲ-ಮಕರ ಜ್ಯೋತಿ ಪೂಜಾ ಮಹೋತ್ಸವಕ್ಕೆ ಭಕ್ತಾದಿಗಳ ದಟ್ಟಣೆ ಒಂದೆಡೆಯಾದರೆ, ಇನ್ನೊಂದೆಡೆ ಮುಖ್ಯ ಮಂತ್ರಿ ಹಾಗೂ 20ಮಂದಿ ಸಚಿವರನ್ನೊಳಗೊಂಡ ನವಕೇರಳ ಯಾತ್ರೆಯೂ ನಡೆಯುತ್ತಿರುವುದರಿಂದ ನಕ್ಸಲರ ಅಡ್ಡಾಡುವಿಕೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಕಣ್ಣೂರಿನಲ್ಲಿ ಇತ್ತೀಚೆಗಷ್ಟೆ ನಕ್ಸಲರು ಮತ್ತು ಪೊಲೀಸರ ಮಧ್ಯೆ ಗುಂಡಿನ ಕಾಳಗ ನಡೆದಿದ್ದು, ಇದರಲ್ಲಿ ಇಬ್ಬರು ನಕ್ಸಲರನ್ನು ಸಎರೆಹಿಡಿಯುವಲ್ಲಿ ಪೊಲಿಸರು ಯಶಸ್ವಿಯಾಗಿದ್ದರು.