ಅಯೋಧ್ಯೆ : ಅಯೋಧ್ಯೆಯ ರಾಮ ಕಥಾ ವಸ್ತು ಸಂಗ್ರಹಾಲಯದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಸಚಿವ ಸಂಪುಟದ ವಿಶೇಷ ಸಭೆ ನಡೆದಿದೆ.
ಸಭೆ ಬಳಿಕ ಮಾತನಾಡಿದ ಸಿಎಂ ಯೋಗಿ, 'ಪವಿತ್ರ ನಗರವಾದ ಅಯೋಧ್ಯೆಯಲ್ಲಿ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆ ಮುಕ್ತಾಯಗೊಂಡಿದೆ.
'ಉತ್ತರ ಪ್ರದೇಶ ಸರ್ಕಾರದ ಇಡೀ ಸಚಿವ ಸಂಪುಟ ಅಯೋಧ್ಯಾಧಾಮಕ್ಕೆ ಆಗಮಿಸಿದೆ. ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಂದು ಮಹತ್ವದ ಸಭೆ ನಡೆಯಿತು. ಇಂದಿನ ಸಂಪುಟ ಸಭೆಯಲ್ಲಿ 14 ಪ್ರಮುಖ ಪ್ರಸ್ತಾವನೆಗಳನ್ನು ತರಲಾಗಿದೆ. ಅವುಗಳಲ್ಲಿ ಉತ್ತರ ಪ್ರದೇಶದಲ್ಲಿ ಒಳನಾಡು ಜಲಮಾರ್ಗ ಪ್ರಾಧಿಕಾರ ಸ್ಥಾಪನೆ ಮೊದಲ ಪ್ರಸ್ತಾವನೆ. ರಾಜ್ಯ ಮಟ್ಟದಲ್ಲಿ ಈ ಪ್ರಾಧಿಕಾರ ರಚಿಸಲು ನಿರ್ಧರಿಸಿದ್ದೇವೆ' ಎಂದು ಮುಖ್ಯಮಂತ್ರಿ ಹೇಳಿದರು.
ಚಳಿಗಾಲದ ಅಧಿವೇಶನದ ದಿನಾಂಕ ಘೋಷಣೆ:
ಇದೇ ವೇಳೆ ಉತ್ತರ ಪ್ರದೇಶ ವಿಧಾನಸಭೆಯ ಚಳಿಗಾಲದ ಅಧಿವೇಶನದ ದಿನಾಂಕವನ್ನೂ ಸಿಎಂ ಘೋಷಿಸಿದ್ದಾರೆ. ಅಧಿವೇಶನ. 'ನ.28ರಿಂದ ಪ್ರಾರಂಭವಾಗಲಿದ್ದು, ಒಂದು ವಾರದವರೆಗೆ ನಡೆಯಲಿದೆ' ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಸಿಎಂ ಯೋಗಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಹನುಮಾನ್‌ಗರ್ಹಿ ದೇವಸ್ಥಾನ ಮತ್ತು ರಾಮ್ ಲಲ್ಲಾ ವಿರಾಜಮಾನ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಇದೇ ಮೊದಲ ಬಾರಿಗೆ ಪವಿತ್ರ ನಗರ ಅಯೋಧ್ಯೆಯ ರಾಮಕಥಾ ವಸ್ತು ಸಂಗ್ರಹಾಲಯದಲ್ಲಿ ರಾಜ್ಯದ ಕಾರ್ಯಕಾರಿಣಿ ಸಭೆ ನಡೆದಿದೆ. ವಸ್ತುಸಂಗ್ರಹಾಲಯವನ್ನು ಭವ್ಯವಾಗಿ ಅಲಂಕರಿಸಲಾಗಿತ್ತು. ಸಂಪುಟ ಸಭೆಯ ಸಭಾಂಗಣದಲ್ಲಿ ಶ್ರೀರಾಮ ಮತ್ತು ಹನುಮಂತನ ಪೋಸ್ಟರ್‌ಗಳನ್ನು ಹಾಕಲಾಗಿತ್ತು.