ಪತ್ತನಂತಿಟ್ಟ: ಶಬರಿಮಲೆ ಕ್ಷೇತ್ರದ ಭದ್ರತಾ ಕರ್ತವ್ಯಕ್ಕೆ ನೇಮಕಗೊಂಡಿರುವ ನೂತನ ಬಾಂಬ್ ಸ್ಕ್ವಾಡ್ ಭಾನುವಾರ ಅಧಿಕಾರ ವಹಿಸಿಕೊಂಡಿದೆ. ಹತ್ತು ದಿನಗಳ ಮೊದಲ ಬ್ಯಾಚ್‍ನ ಕರ್ತವ್ಯದ ಅವಧಿ ಕೊನೆಗೊಂಡ ಹಿನ್ನೆಲೆಯಲ್ಲಿ ಹೊಸ ತಂಡ ನೇತೃತ್ವ ವಹಿಸಿಕೊಂಡಿದೆ.
ದಳದ ಪ್ರಭಾರಿ ಡಿವೈಎಸ್ಪಿ ಎನ್.ಬಿಸ್ವಾಸ್ ಮಾತನಾಡಿ, ಶಬರಿಮಲೆಗೆ ಮಂಡಲ, ಮಕರಜ್ಯೋತ ಕಾಲಾವಧಿಯಲ್ಲಿ ಆಗಮಿಸುವ ಭಕ್ತಾದಿಗಳಿಗೆ ಸುರಕ್ಷಿತ ಹಾಗೂ ಭೀತಿರಹಿತ ದರ್ಶನ ವ್ಯವಸ್ಥೆ ಕಲ್ಪಿಸಿಕೊಡಲು ತಂಡವು ಬದ್ಧವಾಗಿದೆ. ಈಗಾಗಲೇ ದೇಶದಲ್ಲಿನ ಭಯೋತ್ಪಾದಕ ಚಟುವಟಿಕೆ, ಕಳಮಶ್ಯೇರಿ ಬಾಂಬು ಸ್ಪೋಟ, ನಕ್ಸಲ್ ಚಟುವಟಿಕೆ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಜಾಗ್ರತಾ ನಿರ್ದೇಶ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ತಪಾಸಣೆ ನಡೆಸುವಂತೆ ಎನ್.ಬಿಸ್ವಾಸ್ ಕರ್ತವ್ಯ ನಿರತ ಅಧಿಕಾರಿಗಳಿಗೆ ಸೂಚಿಸಿದರು.
ಶಬರಿಮಲೆ ಎಸ್‍ಒ ಎಂ.ಕೆ ಗೋಪಾಲಕೃಷ್ಣನ್ ನೇತೃತ್ವದ ತಂಡವನ್ನು ಕೋಝಿಕ್ಕೋಡ್ ರೇಂಜ್ ಬಿಡಿಡಿ ಎಸ್‍ಎಸ್‍ಐ ಜಯಪ್ರಕಾಶ್ ಮತ್ತು ತ್ರಿಶೂರ್ ರೇಂಜ್ ಬಿಡಿಡಿ ಎಸ್‍ಎಸ್‍ಐ ಮಹಿಪಾಲ್ ಪಿ ದಾಮೋದರನ್ ಮುನ್ನಡೆಸುತ್ತಿದ್ದಾರೆ. ಬಾಂಬ್ ಸ್ಕ್ವಾಡ್ 127 ಸದಸ್ಯರನ್ನು ಒಳಗೊಂಡಿದ್ದು, ಇವರನ್ನು ಶಬರಿಮಲೆಯ ವಿವಿಧ ಪ್ರದೇಶಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ತಂಡ ದಿನದ 24 ತಸುಗಳ ಕಾಲ ಭದ್ರತಾ ತಪಾಸಣೆ ನಡೆಸಲಿರುವುದಾಗಿ ತಿಳಿಸಿದರು.