ನವದೆಹಲಿ: 'ಸರ್ಕಾರಿ ಪ್ರಾಯೋಜಿತ ದಾಳಿಕೋರ'ರಿಂದ ಗುರಿಯಾಗಿರುವ ವಿರೋಧ ಪಕ್ಷಗಳ ಸಂಸದರ ಹಕ್ಕುಗಳನ್ನು ಸಂರಕ್ಷಿಸುವಂತೆ ಕೋರಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ.
'ಸಂಸದರು ಹೊಂದಿರುವ ಸಂವಿಧಾನದತ್ತ ಸ್ವಾತಂತ್ರ್ಯ ಹಾಗೂ ಹಕ್ಕುಗಳ ಉಲ್ಲಂಘನೆಯಾಗಿದೆ.
ವಿರೋಧ ಪಕ್ಷಗಳ ಕೆಲ ನಾಯಕರ ಐಫೋನ್‌ಗಳನ್ನು 'ಸರ್ಕಾರಿ ಪ್ರಾಯೋಜಿತ ದಾಳಿಕೋರ'ರು ಹ್ಯಾಕ್ ಮಾಡಲು ಯತ್ನಿಸುತ್ತಿದ್ದಾರೆ ಎಂಬುದಾಗಿ ಆಯಪಲ್ ಕಂಪನಿಯು ಎಚ್ಚರಿಕೆ ಸಂದೇಶಗಳನ್ನು ನೀಡಿದ ಬೆನ್ನಲ್ಲೇ ಮೊಹುವಾ ಅವರು ಈ ಪತ್ರ ಬರೆದಿದ್ದಾರೆ.
'ವಿರೋಧ ಪಕ್ಷಗಳ ಕೆಲ ನಾಯಕರು, ಸರ್ಕಾರದ ನಿಲುವುಗಳನ್ನು ಪ್ರಶ್ನಿಸಿದ್ದ ಪತ್ರಕರ್ತರು ಹಾಗೂ ನಾಗರಿಕ ಸಂಘಗಳ ಸದಸ್ಯರ ಕುರಿತು ಬೇಹುಗಾರಿಕೆ ನಡೆಸಲು 2019-21ರ ಅವಧಿಯಲ್ಲಿ ಪೆಗಾಸಸ್ ಕುತಂತ್ರಾಂಶ ಬಳಸಲಾಗಿತ್ತು. ಈಗ, ಅಂಥದೇ ಪ್ರಯತ್ನಗಳು ನಡೆಯುತ್ತಿವೆ ಎಂಬುದು ತಿಳಿದು ಮತ್ತಷ್ಟು ಆಘಾತವಾಗಿದೆ' ಎಂದು ವಿವರಿಸಿದ್ದಾರೆ.
ಪತ್ರದಲ್ಲಿನ ಪ್ರಮುಖ ಅಂಶಗಳು
ಬೇಹುಗಾರಿಕೆ ವಿಷಯವನ್ನು ವಿಪಕ್ಷಗಳ ನಾಯಕರು ಸದನದಲ್ಲಿ ಹಲವು ಬಾರಿ ಪ್ರಸ್ತಾಪಿಸಿದ್ದರೂ ಚರ್ಚೆಗೆ ಅವಕಾಶ ನೀಡಲಿಲ್ಲ. ಸರ್ಕಾರದ ಯಾವುದೇ ಸಂಸ್ಥೆಯೂ ಈ ಬಗ್ಗೆ ನಿರ್ಣಾಯಕ ವರದಿ ಸಲ್ಲಿಸಿಲ್ಲ
ಬೇಹುಗಾರಿಕೆ ತಂತ್ರಾಂಶಗಳಿಗೆ ಸಂಬಂಧಿಸಿ ಬಜೆಟ್ ಹಂಚಿಕೆಯನ್ನು ಕೇಂದ್ರ ಸರ್ಕಾರ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡುತ್ತಿದೆ ಎಂದು ಫೈನಾನ್ಶಿಯಲ್ ಟೈಮ್ಸ್ ಪತ್ರಿಕೆ ಮಾರ್ಚ್‌ನಲ್ಲಿ ವರದಿ ಮಾಡಿದೆ. ಇಂಟೆಲೆಕ್ಸಾ ಅಲಯನ್ಸ್ ಸೇರಿದಂತೆ ವಿವಿಧ ಕಂಪನಿಗಳಿಗೆ ₹ 999 ಕೋಟಿ ಮೊತ್ತದ ಗುತ್ತಿಗೆ ನೀಡಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ
ಹಲವಾರು ಕಲ್ಪಿತ ಸಾಕ್ಷ್ಯಗಳನ್ನು ಸ್ಮಾರ್ಟ್‌ಫೋನ್ ಸೇರಿದಂತೆ ಸಂವಹನಕ್ಕೆ ಬಳಸುವ ವಿವಿಧ ಸಾಧನಗಳಲ್ಲಿ ಅಳವಡಿಸಿರುವುದು ಬೆಳಕಿಗೆ ಬಂದಿತ್ತು. ತಮ್ಮ ರಾಜಕೀಯ ಉದ್ದೇಶಗಳ ಈಡೇರಿಕೆಗಾಗಿ ಈ ಮಾಹಿತಿಗಳನ್ನು ಬಳಸಿಕೊಂಡು ಮುಗ್ಧ ಜನರ ವಿರುದ್ಧ ಪಿತೂರಿ ನಡೆಸಿದ್ದು ಬೆಳಕಿಗೆ ಬಂದಿತ್ತು.