ಚೆನ್ನೈ: ನಿನ್ನೆ ಮಧ್ಯಾಹ್ನ 12.31ರ ಸುಮಾರಿಗೆ ಹಿಂದೂ ಮಹಾಸಾಗರದಲ್ಲಿ 10 ಕಿಮೀ ಆಳದಲ್ಲಿ 6.2 ತೀವ್ರತೆಯ ಭೂಕಂಪನ ಸಂಭವಿಸಿದೆ. ಭೂಕಂಪನವು ಶ್ರೀಲಂಕಾದ ಕೊಲಂಬೊದಿಂದ ಆಗ್ನೇಯಕ್ಕೆ 1,326 ಕಿಮೀ ದೂರದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಂಗಳವಾರ ಮಧ್ಯಾಹ್ನ ತಿಳಿಸಿದೆ.
ಆದಾಗ್ಯೂ, ಭಾರತೀಯ ಸುನಾಮಿ ಮುನ್ಸೂಚನಾ ಸಂಸ್ಥೆ (ITEWC) ನಿರ್ವಹಿಸುವ ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ (INCOIS) ವಿಜ್ಞಾನಿಗಳು ಸುನಾಮಿಯ ಅಪಾಯವನ್ನು ತಳ್ಳಿಹಾಕಿದ್ದಾರೆ.
INCOIS ನಲ್ಲಿನ ಓಶಿಯನ್ ಮಾಡೆಲಿಂಗ್, ಅಪ್ಲೈಡ್ ರಿಸರ್ಚ್ ಅಂಡ್ ಸರ್ವಿಸಸ್ (OMARS) ಗ್ರೂಪ್ ಡೈರೆಕ್ಟರ್ ಟಿಎಮ್ ಬಾಲಕೃಷ್ಣನ್ ನಾಯರ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮಾಹಿತಿ ನೀಡಿದ್ದಾರೆ. ಸುನಾಮಿ ಸಂಭವಿಸಬೇಕಾದರೆ ಭೂಕಂಪದ ತೀವ್ರತೆಯು 6.5 ಅಥವಾ ಅದಕ್ಕಿಂತ ಹೆಚ್ಚಿನದಾಗಿರಬೇಕು ಮತ್ತು ಆಳವು 10 ಕಿಮೀ ಗಿಂತ ಕಡಿಮೆಯಿರಬೇಕು. ಆದ್ದರಿಂದ, ಪ್ರಸ್ತುತ ಸನ್ನಿವೇಶದಲ್ಲಿ, ಸುನಾಮಿಯ ಯಾವುದೇ ಸಾಧ್ಯತೆಯಿಲ್ಲ. ಮೇಲಾಗಿ, ಈ ಭೂಕಂಪವು ಸ್ಟ್ರೈಕ್-ಸ್ಲಿಪ್ ಫಾಲ್ಟ್ ಎಂದು ಕರೆಯಲ್ಪಡುವ ಸ್ಥಳದಲ್ಲಿ ಸಂಭವಿಸಿದೆ. ಅಲ್ಲಿ ಟೆಕ್ಟೋನಿಕ್ ಪ್ಲೇಟ್‌ಗಳ ಭಾಗಗಳು ಒಂದಕ್ಕೊಂದು ಸಂಘರ್ಷ ನಡೆಸುವ ಸಂಭವವಿಲ್ಲ ಎಂದು ಹೇಳಿದ್ದಾರೆ.
ಹಿಂದೂ ಮಹಾಸಾಗರದ ಭೂಕಂಪದ ಬಗ್ಗೆ ತಿಳಿಯಲು ತಮಿಳುನಾಡಿನ ತಿರುಚೆಂದೂರ್ ದೇವಸ್ಥಾನದಿಂದ ತನಗೆ ಕರೆ ಬಂದಿದೆ ಎಂದು ನಾಯರ್ ಹೇಳಿದರು. ದೇವಸ್ಥಾನದಿಂದ ನನಗೆ ಕರೆ ಬಂದಿತ್ತು. ಅಲ್ಲಿ ಕೆಲವು ಉತ್ಸವಗಳು ನಡೆಯುತ್ತಿವೆ. ಸುಮಾರು 30,000 ಜನರು ಸೇರಿದ್ದರು. ಯಾವುದೇ ಅಪಾಯವಿಲ್ಲ ಎಂದು ನಾನು ತಿಳಿಸಿದ್ದೇನೆ. ತಿರುಚೆಂದೂರು ದೇವಸ್ಥಾನದಲ್ಲಿ ಪ್ರಸಿದ್ಧವಾದ 'ಕಂದ ಷಷ್ಠಿ' ಉತ್ಸವವು ಆರಂಭವಾಗಿದ್ದು, ತೂತುಕುಡಿ ಜಿಲ್ಲೆಯ ಕರಾವಳಿ ಪಟ್ಟಣದಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ.
2004ರ ಡಿಸೆಂಬರ್ 26ರಂದು ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಕರಾವಳಿಯಲ್ಲಿ 9.1 ತೀವ್ರತೆಯ ಭೂಕಂಪವು ದಾಖಲಾದ ಇತಿಹಾಸದಲ್ಲಿ ಅತಿದೊಡ್ಡ ನೈಸರ್ಗಿಕ ವಿಪತ್ತುಗಳಲ್ಲಿ ಒಂದಾಗಿದೆ. ಅಂದು ಸಂಭವಿಸಿದ ಸುನಾಮಿಯಲ್ಲಿ ಭಾರತ ಮತ್ತು ಇತರ ದೇಶಗಳು ಜೀವ ಮತ್ತು ಆಸ್ತಿ ನಷ್ಟವನ್ನು ಅನುಭವಿಸಿದವು. ಇದರ ನಂತರ, ಭಾರತ ಸರ್ಕಾರವು ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಹೈದರಾಬಾದ್‌ನ INCOIS ನಲ್ಲಿ ಭಾರತೀಯ ಸುನಾಮಿ ಮುನ್ಸೂಚನಾ ಸಂಸ್ಥೆ ಸ್ಥಾಪಿಸಿತು. ಇದು 2007ರ ಅಕ್ಟೋಬರ್ ನಿಂದ ಕಾರ್ಯನಿರ್ವಹಿಸುತ್ತಿದೆ.