ಅಹ್ಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಹಣಾಹಣಿಗೆ ವೇದಿಕೆ ಸಿದ್ಧವಾಗಿದ್ದು, ಜಿದ್ದಾಜಿದ್ದಿನ ಪ್ರಶಸ್ತಿ ಫೈಟ್'ಗೆ ಬದ್ಧವೈರಿಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ಆಟಗಾರರು ಸಜ್ಜಾಗುತ್ತಿದ್ದಾರೆ. ಫೈನಲ್ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣ ಸಾಕ್ಷಿಯಾಗಲಿದ್ದು, ಟೀಂ ಇಂಡಿಯಾ ಆಟಗಾರರನ್ನು ಹುರಿದುಂಬಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಖುದ್ದು ಹಾಜರಾಗಲಿದ್ದಾರೆ.
ಈ ಬಾರಿ ಫೈನಲ್ ಪಂದ್ಯಕ್ಕೆ ಘಟಾನುಘಟಿಗಳು ಫೈನಲ್ ಪಂದ್ಯಕ್ಕೆ ಸಾಕ್ಷಿ ಯಾಗುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಸೂಪರ್ ಸ್ಟಾರ್‍ಗಳಾದ ಅಮಿತಾಬ್ ಬಚ್ಚನ್, ರಜನಿಕಾಂತ್, ಕ್ರಿಕೆಟ್ ದಿಗ್ಗಜರಾದ ಕಪಿಲ್ ದೇವ್, ಸಚಿನ್, ಧೋನಿ ಸೇರಿದಂತೆ ಅತಿಗಣ್ಯ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆಂದು ತಿಳಿದುಬಂದಿದೆ.
ಪಂದ್ಯ ವೀಕ್ಷಣೆಗೆ ಆಸ್ಟ್ರೇಲಿಯಾ ಪ್ರಧಾನಿಗಳಿಗೂ ಮೋದಿ ಆಹ್ವಾನ ನೀಡಿದ್ದು, ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಕೂಡ ಪಂದ್ಯ ವೀಕ್ಷಣೆಗೆ ಆಗಮಿಸಲಿದ್ದಾರೆಂದು ತಿಳಿದುಬಂದಿದೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಕಚೇರಿಯಿಂದ ಈ ಕುರಿತು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಟೀಂ ಇಂಡಿಯಾ ಹುರಿದುಂಬಿಸಲು ಪ್ರಧಾನಿ ನರೇಂದ್ರ ಮೋದಿಯವರು ಬರಲಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯಕ್ಕೆ ಭಾರತದ ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಉಪಸ್ಥಿತರಿರುತ್ತಾರೆಂದು ಪ್ರಕಟಣೆಯಲ್ಲಿ ತಿಳಿಸಿದೆ.
ವಿಶ್ವಕಪ್ ಫೈನಲ್ ಹಣಾಹಣಿ ಅಹಮದಾಬಾದ್ ನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು, ಉನ್ನತ ಮಟ್ಟದ ಸಭೆ ನಡೆಸಿದರು. ಸಭೆಯಲ್ಲಿ ಭದ್ರತೆ, ಸಂಚಾರ ನಿರ್ವಹಣೆ, ಸ್ವಚ್ಛತೆ ಮತ್ತು ಹೆಚ್ಚಿನ ಅಂಶಗಳ ಸಮಗ್ರ ಪರಿಶೀಲನೆ ನಡೆಸಿದರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೂರು ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆತಿಥೇಯ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 70 ರನ್‌ಗಳ ಜಯ ಸಾಧಿಸಿ ಫೈನಲ್ ಗೇರಿತ್ತು. ಇದೀಗ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಂತಿಮ ಹಣಾಹಣಿ ನಡೆಯಲಿದ್ದು, ಫೈನಲ್‌ನಲ್ಲಿ ಪಂದ್ಯಕ್ಕಾಗಿ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.