ಕೈರೊ: ಗಾಜಾ ಪಟ್ಟಿಯಲ್ಲಿರುವ ಅಲ್ ಶಿಫಾ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಲ್ಲಿ ಕನಿಷ್ಠ 32 ರೋಗಿಗಳು ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.
ಆಸ್ಪತ್ರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಶನಿವಾರದಿಂದ ವೈದ್ಯಕೀಯ ಸೇವೆಗಳು ಸ್ಥಗಿತಗೊಂಡಿದ್ದವು.
ಆಸ್ಪತ್ರೆಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದು, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆದರೆ, ಅವರಲ್ಲಿ ಯಾರೂ ಆಸ್ಪತ್ರೆಯಿಂದ ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆಂಬುಲೆನ್ಸ್‌ಗಳ ಮೇಲೆ ಗುಂಡಿನ ದಾಳಿ ನಡೆಯುವ ಕಾರಣದಿಂದ ಅವು ನಿಂತಲ್ಲೇ ನಿಂತಿವೆ ಎಂದು ಆಸ್ಪತ್ರೆ ನಿರ್ದೇಶಕ ಮೊಹಮ್ಮದ್ ಅಬು ಸೆಲ್ಮಿಯಾ 'ಎಎಫ್‌ಪಿ' ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಹಮಾಸ್ ಬಂಡುಕೋರರು ಮಾನವನನ್ನು ಹೇಗೆ ಗುರಾಣಿಯನ್ನಾಗಿ ಬಳಸಿಕೊಳ್ಳುತ್ತಾರೆ ಎಂಬುದಕ್ಕೆ ಅಲ್ ಶಿಫಾ ಆಸ್ಪತ್ರೆ ಉತ್ತಮ ಉದಾಹರಣೆಯಾಗಿದೆ. ಯಾವುದೇ ಸಾಕ್ಷ್ಯಾಧಾರವಿಲ್ಲದೆ ಉಗ್ರರು ಆಸ್ಪತ್ರೆ ಆವರಣದಲ್ಲಿ ಸೇನಾ ಕೇಂದ್ರ ಮತ್ತು ಇತರೆ ಸೇನಾ ಮೂಲಸೌಕರ್ಯಗಳನ್ನು ಇಟ್ಟುಕೊಂಡಿದ್ದಾರೆ ಎಂದು ಇಸ್ರೇಲ್ ಆರೋಪಿಸಿದೆ. ಈ ಮೂಲಕ ಆಸ್ಪತ್ರೆ ಸುತ್ತಮುತ್ತಲಿನ ದಾಳಿಯನ್ನು ಸಮರ್ಥಿಸಿಕೊಂಡಿದೆ.
ಆದರೆ, ಈ ಆರೋಪವನ್ನು ಹಮಾಸ್ ಮತ್ತು ಆಸ್ಪತ್ರೆ ಸಿಬ್ಬಂದಿ ಅಲ್ಲಗೆಳೆದಿದ್ದಾರೆ.
ಆಸ್ಪತ್ರೆಯಿಂದ ಹೊರ ನಡೆದ ಜನ
ಡೇರ್ ಅಲ್-ಬಲಾಹ್/ಖಾನ್ ಯುನಿಸ್): ಪ್ಯಾಲೆಸ್ಟೀನ್‌ನ ಅತಿದೊಡ್ಡ ಅಲ್ ಶಿಫಾ ಆಸ್ಪತ್ರೆ ಸುತ್ತಮುತ್ತ ಇಸ್ರೇಲ್ ಸೇನಾ ಪಡೆಗಳು ದಾಳಿ ನಡೆಸಿರುವ ಕಾರಣ ಈ ಆಸ್ಪತ್ರೆಯಿಂದ ಸಾವಿರಾರು ಜನರು ಹೊರಹೋಗುತ್ತಿರುವ ದೃಶ್ಯಗಳು ಕಂಡುಬಂದವು ಎಂದು ವರದಿಯಾಗಿದೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೊಸ್ ಅಧಾನೋಮ್ ಘೆಬ್ರೆಯೆಸಸ್, 'ಶಿಫಾ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ನೀರು ಪೂರೈಕೆಯಾಗುತ್ತಿಲ್ಲ. ಅಲ್ಲಿ ಆಸ್ಪತ್ರೆಯಂತಹ ವಾತಾವರಣವೇ ಇಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.
ಗುಂಡಿನ ದಾಳಿ: ವಿದ್ಯುತ್ ಪೂರೈಕೆ ಇಲ್ಲದೆ ಇರುವ ಗಾಜಾದ ಅತಿದೊಡ್ಡ ಅಲ್ ಶಿಫಾ ಆಸ್ಪತ್ರೆಯಲ್ಲಿ ಸಿಲುಕಿರುವ ರೋಗಿಗಳನ್ನು ಹೊರತರಲು ಕಾರ್ಯ ನಿರ್ವಹಿಸಲಾಗುತ್ತಿದೆ ಎಂಬ ಇಸ್ರೇಲ್ ಹೇಳಿಕೆಯನ್ನು ಪ್ಯಾಲೆಸ್ಟೀನ್ ಆರೋಗ್ಯ ಅಧಿಕಾರಿಗಳು ಮತ್ತು ಜನರು ಅಲ್ಲಗೆಳೆದಿದ್ದಾರೆ.