'ಈ ತನಿಖೆಯಲ್ಲಿ ಆಯಪಲ್ ಕಂಪನಿಯು ಸೂಕ್ತ ಸಹಕಾರ ನೀಡಲಿದೆ ಎಂಬ ನಂಬಿಕೆ ಇದೆ' ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಆಯಪಲ್ ಕಂಪನಿಗೆ ನೋಟಿಸ್ ಕಳುಹಿಸಿರುವುದನ್ನು ಸುದ್ದಿಗಾರರಿಗೆ ಖಚಿತಪಡಿಸಿದರು.
ಆಯಪಲ್ ಕಂಪನಿಯ ಎಚ್ಚರಿಕೆಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಮುಗಿಬಿದ್ದಿದ್ದವು. 'ಪೆಗಾಸಸ್ ಕುತಂತ್ರಾಂಶ ಪ್ರಕರಣವನ್ನು ಪ್ರಸ್ತಾಪಿಸಿರುವ ವಿಪಕ್ಷಗಳು, ತಮ್ಮ ಬಗ್ಗೆ ಕೇಂದ್ರ ಸರ್ಕಾರ ಬೇಹುಗಾರಿಕೆ ನಡೆಸುತ್ತಿದೆ' ಎಂದು ವಾಗ್ದಾಳಿ ನಡೆಸಿದ್ದವು.
ವಿರೋಧ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್, 'ದೇಶದ ಎಲ್ಲ ಪ್ರಜೆಗಳ ಖಾಸಗಿತನ ಮತ್ತು ಸುರಕ್ಷತೆಯನ್ನು ಸಂರಕ್ಷಣೆ ಮಾಡುವ ತನ್ನ ಹೊಣೆಗಾರಿಕೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಐಫೋನ್‌ಗಳಲ್ಲಿನ ಮಾಹಿತಿಯನ್ನು ಕಳ್ಳತನ ಮಾಡುವ ಯತ್ನಗಳು ನಡೆದಿವೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಿ, ಮೂಲ ಪತ್ತೆ ಹಚ್ಚಲಾಗುವುದು' ಎಂದಿದ್ದರು.
'ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಸ್ಪಂದನಾ ತಂಡ' (ಸಿಇಆರ್‌ಟಿ-ಐಎನ್) ಈ ತನಿಖೆ ನಡೆಸಲಿದೆ. ಈ ಕುರಿತ ತನಿಖೆಯನ್ನು ಸೇರಿಕೊಳ್ಳುವಂತೆ ಆಯಪಲ್ ಕಂಪನಿಯನ್ನು ಕೋರಲಾಗಿದೆ. ಸರ್ಕಾರ ಪ್ರಾಯೋಜಿತ ದಾಳಿ ಆರೋಪಗಳ ಕುರಿತ ವಾಸ್ತವ ಹಾಗೂ ನಿಖರ ಮಾಹಿತಿ ಒದಗಿಸುವಂತೆ ಕೇಳಿದ್ದೇವೆ' ಎಂದು ಅವರು ಹೇಳಿದ್ದರು.
ಯಾರಿಗೆಲ್ಲ ಎಚ್ಚರಿಕೆ ಸಂದೇಶಗಳು...
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖಂಡ ಕೆ.ಸಿ.ವೇಣುಗೋಪಾಲ್, ಸಿಪಿಎಂನ ಸೀತಾರಾಮ್ ಯೆಚೂರಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರಿಗೆ, ಅವರ ಐಫೋನ್‌ನಲ್ಲಿನ ಮಾಹಿತಿಯನ್ನು ಕಳುವು ಮಾಡಲು ಯತ್ನಿಸಲಾಗುತ್ತಿರುವ ಕುರಿತು ಆಯಪಲ್ ಕಂಪನಿಯು ಎಚ್ಚರಿಕೆ ಸಂದೇಶ ರವಾನಿಸಿದೆ.
ಅಸಾದುದ್ದೀನ್ ಒವೈಸಿ (ಎಐಎಂಐಎಂ), ರಾಘವ ಛೆಡ್ಡಾ(ಎಎಪಿ), ಪ್ರಿಯಾಂಕಾ ಚತುರ್ವೇದಿ(ಶಿವಸೇನಾ-ಯುಬಿಟಿ), ಟಿ.ಎಸ್.ಸಿಂಗ್ ದೇವ್, ಪವನ್ ಖೇರಾ, ಎ.ರೇವಂತ ರೆಡ್ಡಿ, ಸುಪ್ರಿಯಾ ಶ್ರೀನಾತೆ (ಕಾಂಗ್ರೆಸ್), ಕೆ.ಟಿ.ರಾಮ ರಾವ್(ಬಿಆರ್‌ಎಸ್) ಅವರಿಗೂ ಸಂದೇಶ ಕಳುಹಿಸಲಾಗಿದೆ.
ಪತ್ರಕರ್ತರಾದ ಸಿದ್ಧಾರ್ಥ ವರದರಾಜನ್, ಶ್ರೀರಾಮ್ ಕರ‍್ರಿ, ರವಿ ನಾಯರ್ ಹಾಗೂ ರೇವತಿ, ಆಬ್ಸರ್ವರ್ ರಿಸರ್ಚ್ ಫೌಂಡೇಷನ್ ಅಧ್ಯಕ್ಷ ಸಮೀರ್ ಸರನ್ ಅವರಿಗೂ ಇಂಥದೇ ಸಂದೇಶವನ್ನು ಆಯಪಲ್ ಕಂಪನಿ ರವಾನಿಸಿದೆ.