ನವದೆಹಲಿ: ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (UGC-NET) ಪಠ್ಯಕ್ರಮವನ್ನು ಪರಿಷ್ಕರಣೆ ಮಾಡಲು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಮುಂದಾಗಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಯುಜಿಸಿ ಅಧ್ಯಕ್ಷ ಎಂ. ಜಗದೇಶ್ ಕುಮಾರ್ ಅವರು, '2017 ರಿಂದ ನೆಟ್ ಪಠ್ಯಕ್ರಮ ಪರಿಷ್ಕರಣೆ ಆಗಿಲ್ಲ.
'ಪಠ್ಯಕ್ರಮ ಬದಲಾಯಿಸಲು ತರಾತುರಿ ಇಲ್ಲ. ಇದಕ್ಕಾಗಿ ತಜ್ಞರ ಸಮಿತಿ ರಚಿಸಿ, ವಿದ್ಯಾರ್ಥಿಗಳಿಗೆ ಗೊಂದಲ ಆಗದಿರುವ ರೀತಿ ಅಂತಿಮಗೊಳಿಸಲಾಗುವುದು' ಎಂದು ಜಗದೇಶ್ ಕುಮಾರ್ ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವೆಬ್‌ಸೈಟ್ ವರದಿ ಮಾಡಿದೆ.
'2020 ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ (NEP) ಜಾರಿಗೊಳಿಸಿದೆ. ವಿಶ್ವವಿದ್ಯಾಲಯಗಳು ಹೊಸ-ಹೊಸ ಕೋರ್ಸ್ ಹಾಗೂ ಪಠ್ಯಕ್ರಮಗಳನ್ನು ಪರಿಚಯಿಸಿವೆ. ಈ ನಿಟ್ಟಿನಲ್ಲಿ ನೆಟ್ ಪರೀಕ್ಷೆಗೆಳ ಪಠ್ಯಕ್ರಮವೂ ಪರಿಷ್ಕರಣೆ ಆಗಲಿದೆ' ಎಂದಿದ್ದಾರೆ.
ಉನ್ನತ ಶಿಕ್ಷಣದಲ್ಲಿ ಬೋಧನೆಗಾಗಿ ಯುಜಿಸಿ ವರ್ಷದಲ್ಲಿ ಎರಡು ಬಾರಿ 83 ಸ್ನಾತಕೋತ್ತರ ವಿಷಯಗಳಿಗೆ ನೆಟ್ ಪರೀಕ್ಷೆಯನ್ನು ನಡೆಸುತ್ತದೆ. ಇದೊಂದು ರಾಷ್ಟ್ರೀಯ ಮಟ್ಟದ ಅರ್ಹತಾ ಪರೀಕ್ಷೆ ಆಗಿರುತ್ತದೆ.