ಕೊಚ್ಚಿ: ಪಕ್ಷ ಸಂಘಟನೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ನೀಡಬೇಕು ಮತ್ತು ಮುಂದಿನ 10 ವರ್ಷಗಳಲ್ಲಿ ಶೇಕಡಾ 50 ರಷ್ಟು ಮಹಿಳೆಯರನ್ನು ಮುಖ್ಯಮಂತ್ರಿಯಾಗಿಸುವ ಗುರಿ ಹೊಂದಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ.
ಶುಕ್ರವಾರ ಕೇರಳ ಮಹಿಳಾ ಕಾಂಗ್ರೆಸ್ ಸಮಾವೇಶ 'ಉತ್ಸಾಹ್' ಉದ್ಘಾಟಿಸಿ ಮಾತನಾಡಿದ ವಯನಾಡ್ ಸಂಸದ, ತಮ್ಮ ಪಕ್ಷದಲ್ಲಿ ಮುಖ್ಯಮಂತ್ರಿಯಾಗಲು ಅಗತ್ಯವಾದ ಗುಣಗಳನ್ನು ಹೊಂದಿರುವ ಹಲವಾರು ಮಹಿಳಾ ನಾಯಕರಿದ್ದಾರೆ ಎಂದು ಹೇಳಿದರು.
"ಇಂದಿನಿಂದ ಮುಂದಿನ 10 ವರ್ಷಗಳಲ್ಲಿ ನಮ್ಮ ಪಕ್ಷದ ಮುಖ್ಯಮಂತ್ರಿಗಳಲ್ಲಿ ಶೇ. 50 ರಷ್ಟು ಮಹಿಳೆಯರು ಇರಬೇಕು ಎಂಬುದು ನಮ್ಮ ಗುರಿ. ಇದು ಕಾಂಗ್ರೆಸ್ ಪಕ್ಷದ ಉತ್ತಮ ಗುರಿ ಎಂದು ನಾನು ಭಾವಿಸಿದ್ದೇನೆ... ಇಂದು ನಮ್ಮಲ್ಲಿ ಒಬ್ಬ ಮಹಿಳಾ ಮುಖ್ಯಮಂತ್ರಿ ಇಲ್ಲ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಮುಖ್ಯಮಂತ್ರಿಯಾಗುವ ಗುಣ ಹೊಂದಿರುವ ಅನೇಕ ಮಹಿಳೆಯರು ಇದ್ದಾರೆ" ಎಂದು ರಾಹುಲ್ ಗಾಂಧಿ ಹೇಳಿದರು.
ಇದೇ ವೇಳೆ ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಇದು ಸಂಪೂರ್ಣವಾಗಿ ಪುರುಷ ಸಂಘಟನೆ ಎಂದರು.
"ಮಹಿಳೆಯರು ಅನೇಕ ವಿಧಗಳಲ್ಲಿ ಪುರುಷರಿಗಿಂತ ಶ್ರೇಷ್ಠರು ಎಂದು ನಾನು ಭಾವಿಸುತ್ತೇನೆ. ಅವರು ಪುರುಷರಿಗಿಂತ ಹೆಚ್ಚು ತಾಳ್ಮೆಯನ್ನು ಹೊಂದಿದ್ದಾರೆ. ಅವರು ಪುರುಷರಿಗಿಂತ ದೀರ್ಘಾವಧಿಯ ದೃಷ್ಟಿಕೋನವನ್ನು ಹೊಂದಿದ್ದಾರೆ. ಅವರು ಪುರುಷರಿಗಿಂತ ಹೆಚ್ಚು ಸಂವೇದನಾಶೀಲರು ಮತ್ತು ಸಹಾನುಭೂತಿ ಹೊಂದಿದ್ದಾರೆ. ಮಹಿಳೆಯರು ಅಧಿಕಾರ ರಚನೆಯ ಭಾಗವಾಗಿರಬೇಕು ಎಂದು ನಾವು ಮೂಲಭೂತವಾಗಿ ನಂಬುತ್ತೇವೆ. ಮಹಿಳೆಯರನ್ನು ಅಧಿಕಾರದಿಂದ ದೂರವಿಡುವುದು ಆರ್ ಎಸ್ಎಸ್ ಸಿದ್ಧಾಂತ" ಎಂದು ಆರೋಪಿಸಿದರು.