ನವದೆಹಲಿ: ಸಂವಿಧಾನದ ಮೂಲ ರಚನೆಯ ಸಿದ್ಧಾಂತವನ್ನು ರೂಪಿಸಿದ ಐತಿಹಾಸಿಕ ಕೇಶವಾನಂದ ಭಾರತಿ ತೀರ್ಪು ಈಗ ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ 10 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಗುರುವಾರ ಹೇಳಿದರು.
ತೀರ್ಪು ಈಗ ಹಿಂದಿ, ತೆಲುಗು, ತಮಿಳು, ಒಡಿಯಾ, ಮಲಯಾಳಂ, ಗುಜರಾತಿ, ಕನ್ನಡ, ಬೆಂಗಾಲಿ, ಅಸ್ಸಾಮಿ ಹಾಗೂ ಮರಾಠಿ ಭಾಷೆಗಳಲ್ಲಿ ಲಭ್ಯವಿದೆ ಎಂದು ಸಿಜೆಐ ಹೇಳಿದರು.
1973ರ ಏಪ್ರಿಲ್ 24ರಂದು ಕೇಶವಾನಂದ ಭಾರತಿ ಪ್ರಕರಣದ ತೀರ್ಪು ಪ್ರಕಟಿಸಲಾಗಿತ್ತು. ಈ ತೀರ್ಪು ಹೊರಬಿದ್ದು 2023ರ ಏಪ್ರಿಲ್ 24ರಂದು 50 ವರ್ಷಗಳು ತುಂಬಿದ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ಕೇಶವಾನಂದ ಭಾರತಿ ಪ್ರಕರಣಕ್ಕೆ ವಿಶೇಷ ವೆಬ್‌ಪುಟವನ್ನು ರಚಿಸಿತು.
'ನಮ್ಮ ತೀರ್ಪುಗಳನ್ನು ಭಾರತೀಯ ಭಾಷೆಗಳಲ್ಲಿ ಭಾಷಾಂತರಿಸಲು ನಮ್ಮ ಪ್ರಯತ್ನಗಳಿಗೆ ಇದು ಸಾಕ್ಷಿ. ಸುಪ್ರೀಂ ಕೋರ್ಟ್‌ನ 20 ಸಾವಿರ ತೀರ್ಪುಗಳನ್ನು ಭಾರತೀಯ ಭಾಷೆಗಳಲ್ಲಿ ಅನುವಾದಿಸಲಾಗಿದೆ ಮತ್ತು ಇ-ಎಸ್‌ಸಿಆರ್ (ಸುಪ್ರೀಂ ಕೋರ್ಟ್ ವರದಿಗಳ ಎಲೆಕ್ಟ್ರಾನಿಕ್ ಆವೃತ್ತಿ) ನಲ್ಲಿ ಅಪ್‌ಲೋಡ್ ಮಾಡಲಾಗಿದೆ' ಎಂದು ಚಂದ್ರಚೂಡ್ ತಿಳಿಸಿದ್ದಾರೆ.
ಏನಿದು ಕೇಶವಾನಂದ ಭಾರತಿ ಪ್ರಕರಣ?:
ಸಂವಿಧಾನಕ್ಕೆ ತಿದ್ದುಪಡಿ ತರುವ ಅಧಿಕಾರ ಸಂಸತ್ತಿಗೆ ಇದೆಯಾದರೂ, ಆ ಅಧಿಕಾರಕ್ಕೆ ಹಲವು ಮಿತಿಗಳು ಇವೆ ಎಂಬುದನ್ನು ಹೇಳುವ 'ಸಂವಿಧಾನದ ಮೂಲ ಸ್ವರೂಪ' ಸಿದ್ಧಾಂತಕ್ಕೆ ಸುಪ್ರೀಂ ಕೋರ್ಟ್ ಸ್ಪಷ್ಟ ರೂಪವನ್ನು ನೀಡಿದ್ದು ಕೇಶವಾನಂದ ಭಾರತಿ ಪ್ರಕರಣದಲ್ಲಿ.
ಸಂವಿಧಾನಕ್ಕೆ ಮೂಲ ಸ್ವರೂಪವೊಂದು ಇದೆ, ಯಾವುದೇ ಸಂದರ್ಭದಲ್ಲಿ ಮೂಲ ಸ್ವರೂಪಕ್ಕೆ ಬದಲಾವಣೆ ತರಲು ಅವಕಾಶ ಇಲ್ಲ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್, ಅದರಲ್ಲೂ ನಿರ್ದಿಷ್ಟವಾಗಿ ಕೇಶವಾನಂದ ಭಾರತಿ ಪ್ರಕರಣವು, ಸಂವಿಧಾನವನ್ನು ರಕ್ಷಿಸುವ ಕೆಲಸ ಮಾಡಿದೆ.
13 ನ್ಯಾಯಮೂರ್ತಿಗಳನ್ನು ಒಳಗೊಂಡಿದ್ದ ನ್ಯಾಯಪೀಠ 1973ರ ಏಪ್ರಿಲ್ 24ರಂದು ಈ ಪ್ರಕರಣದ ತೀರ್ಪನ್ನು ನೀಡಿತ್ತು. ಪ್ರಜಾಪ್ರಭುತ್ವ, ನ್ಯಾಯಾಂಗದ ಸ್ವಾತಂತ್ರ್ಯ, ಅಧಿಕಾರದ ವರ್ಗೀಕರಣ ಮತ್ತು ಜಾತ್ಯತೀತತೆ ಸೇರಿ ಸಂವಿಧಾನದ ಮೂಲ ಸ್ವರೂಪವನ್ನು ಬದಲಾಯಿಸುವ ನಿಟ್ಟಿನಲ್ಲಿ ಸಂಸತ್ತು ಸಾಂವಿಧಾನಿಕ ತಿದ್ದುಪಡಿಯನ್ನು ತರುವುದನ್ನು ನಿರ್ಬಂಧಿಸಿ ಈ ತೀರ್ಪು ನೀಡಲಾಗಿತ್ತು.