HEALTH TIPS

11 ವರ್ಷಗಳಲ್ಲಿ ಯಾವ ಬದಲಾವಣೆಯೂ ಆಗಿಲ್ಲ: ನಿರ್ಭಯಾ ಪೋಷಕರ ಬೇಸರ

             ವದೆಹಲಿ: '11 ವರ್ಷಗಳು ಕಳೆದಿದ್ದರೂ ಯಾವ ಬದಲಾವಣೆಯೂ ಆಗಿಲ್ಲ. ಎಲ್ಲರ ಸಹಕಾರದಿಂದ ನಮಗೆ ನ್ಯಾಯ ದೊರಕಿತು. ಆದರೆ, ಇತ್ಯರ್ಥವಾಗದ ಸಾಕಷ್ಟು ಪ್ರಕರಣಗಳು 10-12 ವರ್ಷಗಳಿಂದ ಕೆಳ ನ್ಯಾಯಾಲಯಗಳಲ್ಲಿ ಉಳಿದುಕೊಂಡಿವೆ'

               ದೇಶವನ್ನೇ ಬೆಚ್ಚಿಬೀಳಿಸಿದ್ದ 'ನಿರ್ಭಯಾ' ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಂದೆ-ತಾಯಿ ಬೇಸರ ವ್ಯಕ್ತಪಡಿಸಿದ್ದು ಹೀಗೆ.

                 2012ರ ಡಿಸೆಂಬರ್‌ 16ರಂದು ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದ ದುಷ್ಕರ್ಮಿಗಳು, ಬರ್ಬರವಾಗಿ ಹಲ್ಲೆ ನಡೆಸಿ ಹೊರಗೆ ಎಸೆದಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಯುವತಿ ಸಿಂಗಪುರದ ಆಸ್ಪತ್ರೆಯಲ್ಲಿ 13 ದಿನಗಳ ಬಳಿಕ (ಡಿಸೆಂಬರ್ 29ರಂದು) ಮೃತಪಟ್ಟಿದ್ದರು.

             ಪ್ರಕರಣದ ಅಪರಾಧಿಗಳಾದ ಮುಕೇಶ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ ಸಿಂಗ್ (31) ಅವರನ್ನು ದೆಹಲಿಯ ತಿಹಾರ್‌ ಜೈಲಿನಲ್ಲಿ 2020ರ ಮಾರ್ಚ್‌ 20ರಂದು ಗಲ್ಲಿಗೇರಿಸಲಾಗಿದೆ.

               ಅತ್ಯಾಚಾರ ಪ್ರಕರಣ ನಡೆದು ಇದೀಗ 11 ವರ್ಷಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ನಿರ್ಭಯಾ ಪೋಷಕರು ಮಾತನಾಡಿದ್ದಾರೆ.

                'ಇಡೀ ದೇಶ ನಮ್ಮೊಟ್ಟಿಗೆ ನಿಂತ ಕಾರಣ ನಮಗೆ ನ್ಯಾಯ ಸಿಕ್ಕಿತು' ಎಂದಿರುವ 'ನಿರ್ಭಯಾ' ತಂದೆ ಬದ್ರಿನಾಥ್‌ ಸಿಂಗ್‌, 'ಈಗ ಅತ್ಯಾಚಾರ ಪ್ರಕರಣಗಳು ವರದಿಯಾದರೆ, ಯಾರೊಬ್ಬರೂ ಸಂತ್ರಸ್ತರ ಪರ ನಿಲ್ಲುವುದಿಲ್ಲ' ಎಂದು ನೊಂದುಕೊಂಡಿದ್ದಾರೆ.

                  ನಿರ್ಭಯಾ ತಾಯಿ ಆಶಾ ದೇವಿ ಅವರು, ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಇನ್ನೂ ಕಡಿಮೆಯಾಗಿಲ್ಲ ಎಂದು ಹೇಳಿದ್ದಾರೆ. 'ಕಾನೂನುಗಳನ್ನು ರೂಪಿಸಲಾಗಿದೆಯಾದರೂ, ಏನನ್ನೂ ಮಾಡಲು ಆಗುತ್ತಿಲ್ಲ. ಯಾವ ಬದಲಾವಣೆಯೂ ಆಗಿಲ್ಲ ಎಂಬುದು ನಮ್ಮನ್ನು ತೀವ್ರ ನಿರಾಸೆಗೊಳಿಸುತ್ತಿದೆ. ಸಾಕಷ್ಟು ಸಂತ್ರಸ್ತರು ನಮ್ಮ ಬಳಿ ಬರುತ್ತಾರೆ. ಅವರಿಗೆ ನೈತಿಕ ಬೆಂಬಲ ನೀಡಲಷ್ಟೇ ನಮಗೆ ಸಾಧ್ಯವಾಗುತ್ತಿದೆ' ಎಂದು ಮರುಗಿದ್ದಾರೆ.

               ನಿರ್ಭಯಾ ಅತ್ಯಾಚಾರ ಪ್ರಕರಣ: ಅಂದಿನಿಂದ ಇಂದಿನವರೆಗೆ ಏನೇನಾಯ್ತು?

'ಒಬ್ಬ ನಿರ್ಭಯಾಗೆ ನೀಡಿದ ನ್ಯಾಯ, ಎಲ್ಲರಿಗೂ ನೀಡಿದಂತಾಗುವುದಿಲ್ಲ' ಎಂದು ಅಭಿಪ್ರಾಯಪಟ್ಟಿರುವ ಸಿಂಗ್‌, '2023ರ ಹೊಸ ವರ್ಷಾಚರಣೆ ಹಿಂದಿನ ದಿನ ವರದಿಯಾದ ಅಂಜಲಿ ಸಿಂಗ್‌ ಪ್ರಕರಣ ಏನಾಯಿತು?' ಎಂದು ಕೇಳಿದ್ದಾರೆ. 'ಪ್ರಕರಣದ ಆರೋಪಿಗಳು ಮದ್ಯಪಾನ ಮಾಡಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿತ್ತು. ಅಂಜಲಿಯವರದ್ದು ಯಾವ ತಪ್ಪೂ ಇರಲಿಲ್ಲ' ಎಂದೂ ಹೇಳಿದ್ದಾರೆ.

                'ನಮ್ಮ ಮಗಳ ಪ್ರಕರಣದಲ್ಲಿ ಪ್ರತಿಭಟನೆಗಳು ನಡೆದಾಗ ತಮ್ಮ ಮಕ್ಕಳೊಂದಿಗೆ ಸಾಕಷ್ಟು ಮಹಿಳೆಯರು ಭಾಗಿವಹಿಸಿದ್ದರು. ಪೊಲೀಸರು ಪ್ರಯೋಗಿಸಿದ ಜಲ ಫಿರಂಗಿಗಳನ್ನು ಎದುರಿಸಿದ್ದರು. ಆಗ ಜನರು ಸಾಕಷ್ಟು ಹೋರಾಟ ನಡೆಸಿದ್ದರು. ಆ ಬಳಿಕವೂ ಪರಿಸ್ಥಿತಿ ಬದಲಾಗಿಲ್ಲ' ಎನ್ನುವ ಮೂಲಕ ತಮ್ಮ ಹೆಂಡತಿಯ ಮಾತನ್ನೇ ಪುನರುಚ್ಚರಿಸಿದ್ದಾರೆ.

             ಈವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿ ಉದ್ಯೋಗಿಯಾಗಿದ್ದ ಅಂಜಲಿ ಸಿಂಗ್‌ ಎನ್ನುವವರ ಸ್ಕೂಟರ್‌ಗೆ 2022ರ ಡಿಸೆಂಬರ್‌ 31ರಂದು ಕಾರು ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸಿಂಗ್‌ ಅವರು ಕಾರಿನಡಿ ಸಿಲುಕಿರುವುದು ಗೊತ್ತಿದ್ದರೂ ಆರೋಪಿಗಳು 12 ಕಿ.ಮೀ. ದೂರದವರೆಗೂ ಎಳೆದುಕೊಂಡು ಹೋಗಿದ್ದರು.

                 'ವ್ಯವಸ್ಥೆಯು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಬದಲಾವಣೆಗಳಾಗಬೇಕು. ಸರಿಯಾದ ಸಮಯದಲ್ಲಿ ನ್ಯಾಯ ದೊರಕಬೇಕು. ಪೊಲೀಸರೂ ಸರಿಯಾಗಿ ಕೆಲಸ ಮಾಡಬೇಕು' ಎಂದು ನಿರ್ಭಯಾ ತಾಯಿ ಒತ್ತಾಯಿಸಿದ್ದಾರೆ.

'25 ವರ್ಷದ ಅಂಜಲಿ ಅವರ ಕುಟುಂಬದವರನ್ನು ಭೇಟಿಯಾಗಿದ್ದೆ. ಅವರ ತಾಯಿ ಕುಸಿದುಹೋಗಿದ್ದಾರೆ. ಅಂಜಲಿ ಮಾತ್ರವೇ ಆ ಕುಟುಂಬದಲ್ಲಿ ದುಡಿಯುತ್ತಿದ್ದವರು' ಎಂದು ಆಶಾ ದೇವಿ ಮರುಗಿದ್ದಾರೆ.

                                            ರಾಷ್ಟ್ರ ರಾಜಧಾನಿಯಲ್ಲೇ ಹೆಚ್ಚು ಪ್ರಕರಣ
               ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಮಾಹಿತಿ ಪ್ರಕಾರ, 2022ರಲ್ಲಿ ದೇಶದ 19 ಮಹಾನಗರಗಳ ಪೈಕಿ ದೆಹಲಿಯಲ್ಲಿ ಮಹಿಳೆಯರ ವಿರುದ್ಧದ ಅತಿಹೆಚ್ಚು ಅಪರಾಧ ಪ್ರಕರಣಗಳು ವರದಿಯಾಗಿವೆ. ಇಲ್ಲಿ 14,158 ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಮುಂಬೈ (6,176) ಮತ್ತು ಬೆಂಗಳೂರು (3,924) ನಂತರದ ಸ್ಥಾನಗಳಲ್ಲಿವೆ.

              ರಾಷ್ಟ್ರ ರಾಜಧಾನಿಯಲ್ಲಿ 2021ಕ್ಕೆ ಹೋಲಿಸಿದರೆ 2022ರಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಶೇ 1.25 ರಷ್ಟು ಅಧಿಕಗೊಂಡಿವೆ. 2021ರಲ್ಲಿ 13,982 ಪ್ರಕರಣಗಳೂ ವರದಿಯಾಗಿದ್ದವು.

              2022ರಲ್ಲಿ 1,204 ಅತ್ಯಾಚಾರ ಹಾಗೂ 5 ಆಯಸಿಡ್ ದಾಳಿ ಪ್ರಕರಣಗಳು ದೆಹಲಿಯಲ್ಲಿ ಬೆಳಕಿಗೆ ಬಂದಿವೆ. ವರದಕ್ಷಿಣೆಗೆ ಸಂಬಂಧಿಸಿದಂತೆ 129 ಮಂದಿ ಮೃತಪಟ್ಟಿದ್ದರೆ, 3,909 ಅಪಹರಣ ಪ್ರಕರಣಗಳೂ ವರದಿಯಾಗಿರುವುದು ಎನ್‌ಸಿಆರ್‌ಬಿ ಅಂಕಿ-ಅಂಶದಿಂದ ಗೊತ್ತಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries