ದೆಹಲಿ ಮತ್ತು ಪಂಜಾಬ್‌ನಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷವು (ಎಎಪಿ) ಮೂರನೆಯ ಸ್ಥಾನದಲ್ಲಿ ಇರಲಿದೆ. ಕೇಂದ್ರದಲ್ಲಿ ಅಧಿಕಾರದ ನೇತೃತ್ವ ವಹಿಸಿರುವ ಬಿಜೆಪಿಯು, ಉತ್ತರಾಖಂಡ, ಹರಿಯಾಣ, ಉತ್ತರ ಪ್ರದೇಶ, ಗುಜರಾತ್, ಗೋವಾ, ಅಸ್ಸಾಂ, ತ್ರಿಪುರ, ಮಣಿಪುರ, ಅರುಣಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿ ಇದೆ. ಪಕ್ಷವು ಈಗ ಮಧ್ಯಪ್ರದೇಶದಲ್ಲಿ ಅಧಿಕಾರ ಉಳಿಸಿಕೊಂಡಿದೆ ಮತ್ತು ರಾಜಸ್ಥಾನವನ್ನು ಕಾಂಗ್ರೆಸ್‌ನಿಂದ ತನ್ನತ್ತ ಸೆಳೆದುಕೊಂಡಿದೆ.
ಈ ರಾಜ್ಯಗಳಲ್ಲದೆ ಬಿಜೆಪಿಯು ಮಹಾರಾಷ್ಟ್ರ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಆಡಳಿತಾರೂಢ ಮೈತ್ರಿಕೂಟದ ಭಾಗವಾಗಿದೆ. ಕಾಂಗ್ರೆಸ್ ಪಕ್ಷವು ಕರ್ನಾಟಕ, ಹಿಮಾಚಲ ಪ್ರದೇಶದಲ್ಲಿ ತನ್ನದೇ ಬಲದ ಮೇಲೆ ಅಧಿಕಾರದಲ್ಲಿದೆ, ತೆಲಂಗಾಣದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲಿದೆ.
ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಆಡಳಿತಾರೂಢ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಭಾಗಿಯಾಗಿದೆ. ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ಕಾಂಗ್ರೆಸ್ಸಿನ ಮಿತ್ರಪಕ್ಷವಾಗಿದ್ದರೂ, ಇಲ್ಲಿ ಕಾಂಗ್ರೆಸ್ ಪಕ್ಷವು ಸರ್ಕಾರದ ಭಾಗವಲ್ಲ. ಭಾನುವಾರದ ಫಲಿತಾಂಶದ ನಂತರ, ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳ ಸಂಖ್ಯೆ ಕಡಿಮೆ ಆಗಿರುವ ಕಾರಣ, ಪ್ರಮುಖ ವಿರೋಧ ಪಕ್ಷವಾಗಿ ಎಎಪಿಯ ಸ್ಥಾನವು ಇನ್ನಷ್ಟು ಗಟ್ಟಿಗೊಂಡಿದೆ.
'ಫಲಿತಾಂಶದ ನಂತರದಲ್ಲಿ ಎಎಪಿ ಪಕ್ಷವು ಉತ್ತರ ಭಾರತದಲ್ಲಿ ಅತಿದೊಡ್ಡ ವಿರೋಧ ಪಕ್ಷವಾಗಿದೆ. ಎರಡು ರಾಜ್ಯಗಳಲ್ಲಿ - ಪಂಜಾಬ್ ಮತ್ತು ದೆಹಲಿ - ಪಕ್ಷವು ಅಧಿಕಾರದಲ್ಲಿದೆ' ಎಂದು ಪಕ್ಷದ ನಾಯಕ ಜಾಸ್ಮಿನ್ ಶಾ 'ಎಕ್ಸ್'ನಲ್ಲಿ ಬರೆದಿದ್ದಾರೆ.