ವಾಷಿಂಗ್ಟನ್: ಉಕ್ರೇನ್-ರಷ್ಯಾ ಸಂಘರ್ಷ, ಅಮೆರಿಕ ನಿರಂತರವಾಗಿ ನೀಡುತ್ತಿರುವ ರಕ್ಷಣಾ ನೆರವಿನ 'ಪ್ರಾಮುಖ್ಯತೆ' ಕುರಿತು ಚರ್ಚಿಸಲು ಶ್ವೇತಭವನದಲ್ಲಿ ಡಿಸೆಂಬರ್ 12ರಂದು ನಡೆಯುವ ಸಭೆಗೆ ಹಾಜರಾಗುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರಿಗೆ ಆಹ್ವಾನ ನೀಡಲಾಗಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೇ ಝೆಲೆನ್‌ಸ್ಕಿಯವರನ್ನು ಆಹ್ವಾನಿಸಿದ್ದಾರೆ.
ಸಂಘರ್ಷದ ಸಂದರ್ಭದಲ್ಲಿ ಉಕ್ರೇನ್‌ನ ತುರ್ತು ಅಗತ್ಯಗಳೇನು ಎಂಬ ಬಗ್ಗೆ ಉಭಯ ನಾಯಕರು ಚರ್ಚಿಸಲಿದ್ದಾರೆ ಎಂದು ಶ್ವೇತಭವನ ಭಾನುವಾರ ಹೇಳಿಕೆ ಬಿಡುಗಡೆ ಮಾಡಿದೆ. ಉಕ್ರೇನ್ ಮತ್ತು ಇಸ್ರೇಲ್‌ಗೆ ರಕ್ಷಣಾ ನೆರವು ಒದಗಿಸಲು ಸಂಸತ್ತಿನ ಒಪ್ಪಿಗೆ ಪಡೆಯುಲು ಎದುರು ನೋಡುತ್ತಿರುವುದಾಗಿಯೂ ತಿಳಿಸಿದೆ.
ಅಮೆರಿಕದ ಆಡಳಿತದ ಕೇಂದ್ರ ಸ್ಥಾನವಾಗಿರುವ 'ಕ್ಯಾಪಿಟಲ್'ನಲ್ಲಿ ಯುಎಸ್ ಸೆನೆಟರ್‌ಗಳನ್ನು ಉದ್ದೇಶಿಸಿ ಮಾತನಾಡುವಂತೆಯೂ ಝೆಲೆನ್‌ಸ್ಕಿಗೆ ಕೋರಲಾಗಿದೆ.
ಝೆಲೆನ್‌ಸ್ಕಿ ಅವರು ಸೋಮವಾರ (ಇಂದು) ವಾಷಿಂಗ್ಟನ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ ಎಂದು ಉಕ್ರೇನ್ ತಿಳಿಸಿದೆ.
ಮುಂಬರುವ ವರ್ಷಗಳಲ್ಲಿ ಉಭಯ ದೇಶಗಳ ನಡುವಣ ಸಹಕಾರ ವೃದ್ಧಿ ಮತ್ತು ವಾಯು ರಕ್ಷಣಾ ವ್ಯವಸ್ಥೆ, ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ಜಂಟಿಯಾಗಿ ಪಾಲ್ಗೊಳ್ಳುವಿಕೆ ಸಂಬಂಧ ಮಾತುಕತೆ ನಡೆಯಲಿದೆ ಎಂದು ಝೆಲೆನ್‌ಸ್ಕಿ ಕಚೇರಿ ಹೇಳಿದೆ.