ಡೀರ್ ಅಲ್-ಬಾಲಾಹ್ : ಕದನ ವಿರಾಮ ಅಂತ್ಯಗೊಂಡ ಬೆನ್ನಲ್ಲೇ ಇಸ್ರೇಲ್ ಯುದ್ಧ ವಿಮಾನಗಳು ಹಮಾಸ್ ಬಂಡುಕೋರರನ್ನು ಗುರಿಯಾಗಿಸಿಕೊಂಡು ಗಾಜಾ ಮೇಲೆ ಶುಕ್ರವಾರ ದಾಳಿ ಆರಂಭಿಸಿದ್ದು, ಮತ್ತೆ ಪೂರ್ಣ ಪ್ರಮಾಣದಲ್ಲಿ ಯುದ್ಧ ಆರಂಭವಾಗಿದೆ.
ಕದನ ವಿರಾಮ ಅಂತ್ಯಗೊಂಡ ಅರ್ಧ ಗಂಟೆಯಲ್ಲೇ ಯುದ್ಧ ಆರಂಭಿಸುವುದಾಗಿ ಘೋಷಿಸಿದ ಇಸ್ರೇಲ್, ದಕ್ಷಿಣ ಗಾಜಾ ಮೇಲೆ ವಾಯುದಾಳಿ ನಡೆಸಿದೆ.
'ಶುಕ್ರವಾರ ನಡೆಸಿದ ಮೊದಲ ವಾಯುದಾಳಿಯಲ್ಲಿ ಇಲ್ಲಿನ ಮನೆಯೊಂದು ಧ್ವಂಸವಾಗಿದೆ. ಕದನ ವಿರಾಮ ಅಂತ್ಯಗೊಂಡ ಒಂದು ಗಂಟೆ ಒಳಗಾಗಿ ವಿವಿಧೆಡೆ ನಡೆಸಿದ ದಾಳಿಯಲ್ಲಿ 14 ಮಂದಿ ಮೃತಪಟ್ಟಿದ್ದಾರೆ, ಹತ್ತಾರು ಜನರು ಗಾಯಗೊಂಡಿದ್ದಾರೆ' ಎಂದು ಗಾಜಾ ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್-ಕಿದ್ರಾ ತಿಳಿಸಿದ್ದಾರೆ.
ಇತ್ತ ಇಸ್ರೇಲ್ ಮೇಲೂ ಹಮಾಸ್ ರಾಕೆಟ್ ದಾಳಿ ಆರಂಭಿಸಿದೆ, ಆದರೆ ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.
ಇದಕ್ಕೂ ಮುನ್ನ ಇಸ್ರೇಲ್, ಕದನ ವಿರಾಮ ಒಪ್ಪಂದದ ನಿಯಮಗಳನ್ನು ಹಮಾಸ್ ಬಂಡುಕೋರರು ಉಲ್ಲಂಘಿಸುತ್ತಿದ್ದಾರೆ. ಗಾಜಾದಿಂದ ಇಸ್ರೇಲ್‌ನತ್ತ ರಾಕೆಟ್ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿತ್ತು.
ಇಸ್ರೇಲ್-ಹಮಾಸ್ ಬಂಡುಕೋರರ ಮಧ್ಯೆ ನ.24ರಿಂದ ಆರಂಭವಾಗಿದ್ದ ಕದನ ವಿರಾಮ ನಾಲ್ಕು ದಿನಗಳ ಬಳಿಕ ಮುಕ್ತಾಯಗೊಂಡಿತ್ತು. ನಂತರ ಕತಾರ್ ಮತ್ತು ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ಮಾನವೀಯ ದೃಷ್ಟಿಯಿಂದ ಮತ್ತಷ್ಟು ದಿನಗಳ ಕಾಲ ವಿಸ್ತರಣೆಯಾಗಿತ್ತು.
ವಾರಕ್ಕೂ ಹೆಚ್ಚು ದಿನ ಅಸ್ತಿತ್ವದಲ್ಲಿದ್ದ ಕದನ ವಿರಾಮದ ಸಂದರ್ಭದಲ್ಲಿ ಹಮಾಸ್ ಮತ್ತು ಇತರ ಭಯೋತ್ಪಾದಕರು 100ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದರೆ, ಇಸ್ರೇಲ್ 240 ಪ್ಯಾಲೆಸ್ಟೀನಿಯನ್ನರನ್ನು ಬಿಡುಗಡೆ ಮಾಡಿದೆ.
ಹಮಾಸ್ ಬಳಿ ಇನ್ನೂ ಎಷ್ಟು ಮಂದಿ ಒತ್ತೆಯಾಳುಗಳಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಸುಮಾರು 125ಕ್ಕೂ ಹೆಚ್ಚು ಮಂದಿ ಒತ್ತೆಯಾಳುಗಳಿದ್ದಾರೆ ಎಂದು ಇಸ್ರೇಲ್ ಹೇಳಿದೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಯಂಟನಿ ಬ್ಲಿಂಕನ್ ಅವರು, 'ಪ್ಯಾಲೆಸ್ಟೀನ್ ನಾಗರಿಕರ ರಕ್ಷಣೆಗೆ ಪ್ರಯತ್ನ ಮುಂದುವರಿಸಿ' ಎಂದು ಕರೆ ನೀಡಿದ ಬೆನ್ನಲ್ಲೇ ಇಸ್ರೇಲ್ ದಾಳಿ ತೀವ್ರಗೊಳಿಸಿದೆ. ಆದರೆ ಹಮಾಸ್ ಬಳಿ ಇರುವ 125ಕ್ಕೂ ಹೆಚ್ಚು ಒತ್ತೆಯಾಳುಗಳ ರಕ್ಷಣೆ ಹೇಗೆ ಎಂಬುದು ಪ್ರಶ್ನೆಯಾಗಿದೆ.
ಖಾನ್ ಯುನಿಸ್ ನಗರದ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ ಪರಿಣಾಮ ಕಟ್ಟಡಗಳು ಧ್ವಂಸಗೊಂಡಿರುವುದು -ಎಎಫ್‌ಪಿ ಚಿತ್ರ-ಬೆಂಜಮಿನ್ ನೆತನ್ಯಾಹು ಇಸ್ರೇಲ್ ಪ್ರಧಾನಿಕದನವಿರಾಮ ನಿಯಮವನ್ನು ಹಮಾಸ್ ಪಾಲಿಸದಿರುವುದರಿಂದ ಮತ್ತೆ ಯುದ್ಧ ಆರಂಭಿಸಲಾಗಿದೆ. ಇಸ್ರೇಲ್ ನಾಗರಿಕರ ಮೇಲೆ ಹಮಾಸ್ ರಾಕೆಟ್ ದಾಳಿ ನಡೆಸುತ್ತಿದೆ. -ಜೇಮ್ಸ್ ಎಲ್ಡರ್ ಯುನಿಸೆಫ್ ವಕ್ತಾರ ಗಾಜಾದಲ್ಲಿ ಶಾಶ್ವತ ಕದನ ವಿರಾಮ ಅನುಷ್ಠಾನಗೊಳ್ಳಬೇಕು. ಇಸ್ರೇಲ್-ಹಮಾಸ್ ಮಧ್ಯೆ ಯುದ್ಧ ನಿಲುಗಡೆಗೆ ಕ್ರಮ ಕೈಗೊಳ್ಳದೇ ಇದ್ದರೆ ಮಕ್ಕಳ ಕೊಲೆಯನ್ನು ಅನುಮೋದಿಸಿದಂತಾಗುತ್ತದೆ.ಮತ್ತೆ ಕದನ ವಿರಾಮಕ್ಕೆ ಯತ್ನ: ಕತಾರ್ ಇಸ್ರೇಲ್-ಹಮಾಸ್ ಮಧ್ಯೆ ಕದನ ವಿರಾಮ ಮರು ಆರಂಭಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಉಭಯ ದೇಶಗಳ ನಡುವೆ ಮತ್ತೆ ದಾಳಿ-ಪ್ರತಿದಾಳಿ ನಡೆಯುತ್ತಿರುವುದು ವಿಷಾದನೀಯ ಎಂದು ಮಧ್ಯಸ್ಥಿಕೆ ವಹಿಸಿರುವ ಕತಾರ್ ಶುಕ್ರವಾರ ಹೇಳಿದೆ.
'ಕದನ ವಿರಾಮ ಅಂತ್ಯಗೊಂಡ ಬೆನ್ನಲ್ಲೇ ಬಾಂಬ್ ದಾಳಿ ಮುಂದುವರಿಸಿರುವುದು ಮಧ್ಯಸ್ಥಿಕೆ ಪ್ರಯತ್ನವನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಅಂತರರಾಷ್ಟ್ರೀಯ ಸಮುದಾಯಗಳು ಹಿಂಸಾಚಾರ ತಡೆಗೆ ತಕ್ಷಣ ಕ್ರಮ ವಹಿಸಬೇಕಿದೆ' ಎಂದು ಕತಾರ್ ವಿದೇಶಾಂಗ ಇಲಾಖೆ ಹೇಳಿದೆ.