ನವದೆಹಲಿ: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಸಂಸದರು ಮುಂದಿನ 14 ದಿನಗಳಲ್ಲಿ ಅವರ ಸಂಸದ ಸ್ಥಾನ ಅಥವಾ ಶಾಸಕ ಸ್ಥಾನವನ್ನು ತೊರೆಯಬೇಕು. ಇಲ್ಲದಿದ್ದರೆ ಅವರು ತಮ್ಮ ಸಂಸತ್ ಸದಸ್ಯತ್ವವನ್ನು ಕಳೆದುಕೊಳ್ಳಲಿದ್ದಾರೆ ಎಂದು ಸಂವಿಧಾನದಲ್ಲಿ ನೀಡಲಾಗಿರುವ ಅವಕಾಶದ ಆಧಾರದಲ್ಲಿ ತಜ್ಞರೊಬ್ಬರು ತಿಳಿಸಿದ್ದಾರೆ.
ಕೇಂದ್ರ ಸಚಿವರೂ ಸೇರಿ 21 ಸಂಸದರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಅವರಲ್ಲಿ ತಲಾ ಏಳು ಮಂದಿ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕಣಕ್ಕಿಳಿದಿದ್ದರು. ಛತ್ತೀಸಗಢದಲ್ಲಿ ನಾಲ್ವರು ಮತ್ತು ತೆಲಂಗಾಣದಲ್ಲಿ ಮೂರು ಸಂಸದರು ಕಣಕ್ಕಿಳಿದಿದ್ದರು.
14 ದಿನದೊಳಗೆ ರಾಜೀನಾಮೆ ನೀಡದ ಸಂಸದರು ಸಂವಿಧಾನದ ವಿಧಿ 101ರ 'ಬಹುಸದಸ್ಯತ್ವ ತಡೆ ನೀತಿ' ಅಡಿ ಸಂಸತ್ ಸದಸ್ಯತ್ವ ಕಳೆದುಕೊಳ್ಳುತ್ತಾರೆ ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ. ಆಚಾರಿ ತಿಳಿಸಿದ್ದಾರೆ.