ಇಂಫಾಲ: ಮಣಿಪುರದ ಉಖ್ರುಲ್ ಜಿಲ್ಲೆಯ ಸಾರ್ವಜನಿಕ ವಲಯದ ಬ್ಯಾಂಕ್‌ನ ಶಾಖೆಯೊಂದರಿಂದ ಮುಖಕ್ಕೆ ಮಾಸ್ಕ್ ಧರಿಸಿದ ಶಸ್ತ್ರಸಜ್ಜಿತ ಡಕಾಯಿತರು 18.80 ಕೋಟಿ ರೂ. ಹಣವನ್ನು ದೋಚಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಈ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯು ಭಾರತೀಯ ರಿಸರ್ವ್ ಬ್ಯಾಂಕ್ ಉಖ್ರುಲ್ ಜಿಲ್ಲೆಯ ಇತರೆ ಬ್ಯಾಂಕ್‌ಗಳು ಮತ್ತು ಎಟಿಎಂಗಳಿಗೆ ಮೀಸಲಾದ ಹಣವನ್ನು ಸಂಗ್ರಹಿಸುವ ಕರೆನ್ಸಿ ಚೆಸ್ಟ್ ಆಗಿದೆ.
ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ದರೋಡೆಕೋರರು ರಾಜ್ಯ ರಾಜಧಾನಿ ಇಂಫಾಲ್‌ನಿಂದ ಸುಮಾರು 80 ಕಿಮೀ ದೂರದಲ್ಲಿರುವ ಉಖ್ರುಲ್ ಪಟ್ಟಣದ ಬ್ಯಾಂಕ್‌ಗೆ ಆಗಮಿಸಿ, ಭದ್ರತಾ ಸಿಬ್ಬಂದಿಯನ್ನು ಬೆದರಿಸಿ ಹಣವನ್ನು ದೋಚಿದ್ದಾರೆ.
ದುಷ್ಕರ್ಮಿಗಳು, ನೌಕರರು ಮತ್ತು ಭದ್ರತಾ ಸಿಬ್ಬಂದಿಯನ್ನು ಬ್ಯಾಂಕ್‌ನ ವಾಶ್‌ರೂಮ್‌ನೊಳಗೆ ಲಾಕ್ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗನ್ ಪಾಯಿಂಟ್‌ನಲ್ಲಿ ಬ್ಯಾಂಕ್‌ನ ಹಿರಿಯ ಸಿಬ್ಬಂದಿಯಿಂದಲೇ ವಾಲ್ಟ್ ತೆರೆಯಿಸಿದ್ದು, ಬಳಿಕ ದರೋಡೆಕೋರರು ಹಣವನ್ನು ದೋಚಿದ್ದಾರೆ. ಈ ಕುರಿತು ಉಖ್ರುಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿಗಳನ್ನು ಗುರುತಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಆರಂಭಿಸಿದ್ದಾರೆ.