ನವದೆಹಲಿ: ಕೌಶಲ ಅಭಿವೃದ್ಧಿ ನಿಗಮದ ಹಣಕಾಸು ಹಗರಣ ಪ್ರಕರಣದಲ್ಲಿ ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅವರಿಗೆ ಜಾಮೀನು ನೀಡಿರುವ ಹೈಕೋರ್ಟ್ ಆದೇಶದ ವಿರುದ್ಧ ಆಂಧ್ರಪ್ರದೇಶ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಜ.19 ರಂದು ವಿಚಾರಣೆ ನಡೆಸಲಿದೆ.
ನಾಯ್ಡು ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು, ರಾಜ್ಯ ಸರ್ಕಾರದ ಮನವಿಗೆ ಉತ್ತರ ಸಲ್ಲಿಸಲು ಕಾಲಾವಕಾಶ ಕೋರಿದ ನಂತರ ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆಯನ್ನು ಮುಂದೂಡಿತು. ನ.28 ರಂದು ಸುಪ್ರೀಂ ಕೋರ್ಟ್ ಈ ಮನವಿಯ ಬಗ್ಗೆ ನಾಯ್ಡು ಅವರಿಂದ ಪ್ರತಿಕ್ರಿಯೆ ಕೇಳಿತ್ತು.
ಪ್ರಕರಣದ ಹಿನ್ನೆಲೆ:
ಕೌಶಲ ಅಭಿವೃದ್ಧಿ ನಿಗಮದ ಹಣಕಾಸು ಹಗರಣದ ಪ್ರಕರಣದಲ್ಲಿ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಆಂಧ್ರಪ್ರದೇಶದ ಸಿಐಡಿ, ಸೆಪ್ಟೆಂಬರ್ 9 ರಂದು ಬಂಧಿಸಿ ರಾಜಮಂಡ್ರಿ ಜೈಲಿಗೆ ಕಳುಹಿಸಿತ್ತು.
'ನಾಯ್ಡು ಸಿಎಂ ಆಗಿದ್ದಾಗ ಆಂಧ್ರಪ್ರದೇಶದಾದ್ಯಂತ ಕೌಶಲ ಕೇಂದ್ರಗಳನ್ನು ತೆರೆಯುವಲ್ಲಿ ನಿಗಮಕ್ಕೆ ಬಿಡುಗಡೆಯಾಗಿದ್ದ ಸುಮಾರು ₹3,300 ಕೋಟಿ ಹಣದಲ್ಲಿ ನಾಯ್ಡು ಅವರಿಂದ ಸರ್ಕಾರಕ್ಕೆ ₹370ಕೋಟಿ ವಂಚನೆ ಆಗಿದೆ' ಎಂಬ ಆರೋಪದ ಮೇಲೆ ಸಿಐಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ನಾಯ್ಡು 3ನೇ ಆರೋಪಿಯಾಗಿದ್ದಾರೆ.