ಕೋಝಿಕ್ಕೋಡ್: ಶಸ್ತ್ರ ಚಿಕಿತ್ಸೆ ವೇಳೆ ಹೊಟ್ಟೆಯೊಳಗೆ ಕತ್ತರಿ ಸಿಲುಕಿಕೊಂಡ ಘಟನೆಗೆ ಪರಿಹಾರ ಕೋರಿ ಹರ್ಷಿನಾ ಹೈಕೋರ್ಟ್ ಮೆಟ್ಟಿಲೇರಲಿದ್ದಾರೆ.
ಹರ್ಷಿನ ಸಮರ ಸಮಿತಿಯು ರೂ.ಒಂದು ಕೋಟಿಗೆ ಒತ್ತಾಯಿಸಿದೆ. ಘಟನೆಗೆ ಸಂಬಂಧಿಸಿದಂತೆ ಶಸ್ತ್ರಚಿಕಿತ್ಸೆ ನಡೆಸಿದ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರು ಮತ್ತು ದಾದಿಯರನ್ನು ವಿಚಾರಣೆಗೆ ಒಳಪಡಿಸಲು ಪೋಲೀಸರು ಎರಡು ದಿನಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಿದವರ ವಿರುದ್ಧ ಸರ್ಕಾರ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಹರ್ಷಿನಾ ಸೆಕ್ರೆಟರಿಯೇಟ್ ಎದುರು ಪ್ರತಿಭಟನೆ ನಡೆಸಿದ್ದರು. ಇದರೊಂದಿಗೆ ವೈದ್ಯರು ಮತ್ತು ನರ್ಸ್‍ಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರ ಅನುಮತಿ ನೀಡಿದೆ. ವೈದ್ಯಕೀಯ ದುಷ್ಕøತ್ಯಕ್ಕೆ ಕಾರಣರಾದವರ ವಿರುದ್ಧ ಐಪಿಸಿ 338 ರ ಅಡಿಯಲ್ಲಿ ನಿರ್ಲಕ್ಷ್ಯದ ಕೃತ್ಯದಿಂದ ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವ ಆರೋಪ ಹೊರಿಸಲಾಗಿದೆ, ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಘಟನೆಯು 2017 ರಲ್ಲಿ ನಡೆದಿತ್ತು. ವೈದ್ಯರಾದ ಸಿ.ಕೆ.ರಮೇಶನ್, ಡಾ. ಎಂ.ಶಹನಾ ಮತ್ತು ಎಂ. ರಹನಾ ಮತ್ತು ಕೆ.ಜಿ.ಮಂಜು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ದೂರು. ಶಸ್ತ್ರಚಿಕಿತ್ಸೆಯ ನಂತರವೂ ಹರ್ಷಿನಾ ತೀವ್ರ ಹೊಟ್ಟೆ ನೋವು ಅನುಭವಿಸುತ್ತಿದ್ದರು. ಬಳಿಕ ಸ್ಕ್ಯಾನಿಂಗ್ ಮಾಡುವಾಗ ಹೊಟ್ಟೆಯಲ್ಲಿ ಕತ್ತರಿ ಸಿಲುಕಿರುವುದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ. ಬಳಿಕ ಮತ್ತೆ ಶಸ್ತ್ರಚಿಕಿತ್ಸೆ ಮೂಲಕ ಕತ್ತರಿ ತೆಗೆಯಲಾಯಿತು. ಹಲವು ಕಾನೂನು ಹೋರಾಟಗಳ ನಂತರ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ದೊರೆತಿದ್ದು, ಸೂಕ್ತ ಪರಿಹಾರ ಸಿಗುವವರೆಗೆ ಕಾನೂನು ಹೋರಾಟ ಮುಂದುವರಿಸುವುದಾಗಿ ಹರ್ಷಿನಾ ತಿಳಿಸಿದರು.