ಬೆಂಗಳೂರು: ಸೂರ್ಯನ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಕಳುಹಿಸಿರುವ ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯ ಎರಡನೇ ಉಪಕರಣ ಚಾಲನೆಗೊಂಡಿದೆ.
'ಈ SWIS ಉಪಕರಣ ಆದಿತ್ಯ ಎಲ್1 ನೌಕೆಯ ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸ್‌ಪರಿಮೆಂಟ್ (ASPEX) ಭಾಗವಾಗಿದ್ದು, ಕಳೆದ 2 ದಿನಗಳಲ್ಲಿ SWIS ನಿಂದ ಕಂಡುಕೊಳ್ಳಲಾದ ಮಾಹಿತಿ ಪ್ರಕಾರ ಸೂರ್ಯನ ಹೊರಭಾಗದ ಪ್ರೋಟಾನ್ ಮತ್ತು ಆಲ್ಫಾ ಕಣಗಳ ಶಕ್ತಿಯ ವ್ಯತ್ಯಾಸಗಳನ್ನು ಗುರುತಿಸಲಾಗಿದೆ' ಎಂದು ಇಸ್ರೊ ಮಾಹಿತಿ ನೀಡಿದೆ.
ಸೆಪ್ಟೆಂಬರ್ 2ರಂದು ಶ್ರೀಹರಿಕೋಟದ ಇಸ್ರೊ ಉಡಾವಣಾ ಕೇಂದ್ರದಿಂದ 'ಆದಿತ್ಯ-ಎಲ್ 1' ಬಾಹ್ಯಾಕಾಶ ನೌಕೆ ಹೊತ್ತ ಪಿಎಸ್‌ಎಲ್‌ವಿ-ಸಿ 57 ರಾಕೆಟ್ ನಭಕ್ಕೆ ಚಿಮ್ಮಿತ್ತು. ಸೂರ್ಯನ ಅಧ್ಯಯನಕ್ಕಾಗಿ ಭಾರತ ನಡೆಸಿದ ಚೊಚ್ಚಲ ಯೋಜನೆ ಇದಾಗಿದೆ.
ಆದಿತ್ಯ ಎಲ್ 1 ಅನ್ನು ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾಗಿದ್ದು, ಒಟ್ಟು ಏಳು ಉಪಕರಣಗಳು ಇವೆ. ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಲಗ್ರಾಂಜಿಯನ್ ಬಿಂದುವಿನಲ್ಲಿ ಆದಿತ್ಯ ಎಲ್-1 ಅಂತರಿಕ್ಷ ವೀಕ್ಷಣಾಲಯವನ್ನುಇರಿಸಲಾಗುತ್ತದೆ. ಇದು ಯಾವುದೇ ಅಡಚಣೆ ಇಲ್ಲದೆ ನಿರಂತರವಾಗಿ ಸೂರ್ಯನಲ್ಲಿ ನಡೆಯುವ ಸೌರ ಚಟುವಟಿಕೆಗಳನ್ನು ಗಮನಿಸುತ್ತದೆ.
ನಾಲ್ಕು ಪ್ರತ್ಯೇಕ ಉಪಕರಣಗಳಿಂದ ಸೂರ್ಯನ ಪ್ರಭಾಗೋಳ, ವರ್ಣಗೋಳ ಮತ್ತು ಕಿರೀಟದ ಅಧ್ಯಯನವನ್ನು ನಿರಂತರವಾಗಿ ನಡೆಸಲಿದೆ. ಉಳಿದ ಮೂರು ಉಪಕರಣಗಳು ಅಯಸ್ಕಾಂತ ಕ್ಷೇತ್ರ ಮತ್ತು ಕಣ ಪ್ರವಾಹದ ವೀಕ್ಷಣೆ ನಡೆಸುತ್ತವೆ.