ನವದೆಹಲಿ: ಡಿಸೆಂಬರ್ 4 ರಂದು ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಶನಿವಾರ ಸರ್ವಪಕ್ಷಗಳ ನಾಯಕರ ಸಭೆ ಏರ್ಪಡಿಸಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಈ ಸಭೆ ನಡೆಸಲಿದ್ದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಸೇರಿದಂತೆ ಪ್ರಮುಖ ನಾಯಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಚಳಿಗಾಲದ ಅಧಿವೇಶನ ಡಿ.22ರ ವರೆಗೆ ನಡೆಯಲಿದೆ. ಸಂಸತ್ತಿನ ಮುಂದೆ ಒಟ್ಟು 37 ಮಸೂದೆಗಳು ಬಾಕಿಯಿದ್ದು, ಅವುಗಳಲ್ಲಿ 12 ಮಸೂದೆಗಳನ್ನು ಅಧಿವೇಶನದಲ್ಲಿ ಪರಿಗಣನೆ ಮತ್ತು ಅಂಗೀಕಾರಕ್ಕೆ ಪಟ್ಟಿ ಮಾಡಲಾಗಿದೆ. ಏಳು ಹೊಸ ಮಸೂದೆಗಳ ಮಂಡನೆ, ಪರಿಗಣನೆ ಮತ್ತು ಅಂಗೀಕಾರಕ್ಕೆ ಸರ್ಕಾರ ಚಿಂತನೆ ನಡೆಸಿದೆ.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧದ 'ಪ್ರಶ್ನೆಗಾಗಿ ಲಂಚ' ಆರೋಪದ ಬಗ್ಗೆ ನೈತಿಕ ಸಮಿತಿಯ ವರದಿಯನ್ನು ಅಧಿವೇಶನದಲ್ಲಿ ಮಂಡಿಸಲಾಗುವುದು. ಸಮಿತಿಯು ಮಹುವಾ ಅವರ ಉಚ್ಚಾಟನೆಗೆ ಶಿಫಾರಸು ಮಾಡಿದ್ದು ಇದು ಜಾರಿಗೆ ಬರುವ ಮೊದಲು ವರದಿಯನ್ನು ಸದನದಲ್ಲಿ ಅಂಗೀಕರಿಸಬೇಕಿದೆ.
ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಮಸೂದೆಗೆ ಸಂಸತ್ತಿನ ಒಪ್ಪಿಗೆ ಪಡೆದುಕೊಳ್ಳುವುದು ಕೇಂದ್ರದ ಪ್ರಮುಖ ಉದ್ದೇಶ ಆಗಿದೆ.
ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರ (ನೇಮಕ, ಸೇವಾ ನಿಬಂಧನೆಗಳು ಮತ್ತು ಅಧಿಕಾರ ಅವಧಿ) ಮಸೂದೆ ಕೂಡ ಚರ್ಚೆಗೆ ಬರಲಿದೆ.