ಕಾಸರಗೋಡು: ಸಮುದ್ರದಲ್ಲಿ ಸ್ನಾನಕ್ಕಿಳಿದು ಅಲೆಯಲ್ಲಿ ಸಿಲುಕಿದ್ದ 20ಕ್ಕೂ ಹೆಚ್ಚು ಮಂದಿ ಮಕ್ಕಳನ್ನು ಮೀನುಗಾರರು ರಕ್ಷಿಸಿ ದಡ ಸೇರಿಸಿದ ಘಟನೆ ಕಾಸರಗೋಡು ಕಡಪ್ಪುರದಲ್ಲಿ ನಡೆದಿದೆ. ಕಾಸರಗೋಡು ಕಡಪ್ಪುರದಲ್ಲಿ ನಡೆದ ಅಯ್ಯಪ್ಪ ದೀಪೋತ್ಸವಕ್ಕೆ ಆಗಮಿಸಿದ್ದ 12ರಿಂದ 14ರ ಹರೆಯದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮುದ್ರ ದಡಕ್ಕೆ ಆಗಮಿಸಿ, ಮೀನುಗಾರರು ಬಳಸುವ ಕ್ಯಾನ್‍ಗಳನ್ನು ಸೊಂಟಕ್ಕೆ ಬಿಗಿದು ನೀರಿಗಿಳಿದಿದ್ದರು.
ಈ ಸಂದರ್ಭ ಬಲವಾದ ಅಲೆ ಮಕ್ಕಳನ್ನು ನೀರಿನಲ್ಲಿ ದೂರಕ್ಕೆ ಎಳೆದೊಯ್ದಿದೆ. ಇದನ್ನು ದೂರದಿಂದ ಗಮನಿಸುತ್ತಿದ್ದ ಸ್ಥಳೀಯ ಮೀನುಕಾರ್ಮಿಕರಾದ ಬಾಬು, ಚಿತ್ರಾಕರನ್, ಪುಷ್ಪಾಕರ್, ಹರೀಶ್ ಎಂಬವರು ನೀರಿಗೆ ಧುಮುಕಿ ನೀರಲ್ಲಿ ಮುಳುಗೇಳುತ್ತಿದ್ದ ಮಕ್ಕಳನ್ನು ಹರಸಾಹಸಪಟ್ಟು ದಡ ಸೇರಿಸಿದ್ದಾರೆ. ಈ ಮೂಲಕ ಎಲ್ಲ 21ಮಂದಿ ಮಕ್ಕಳೂ ಸುರಕ್ಷಿತವಾಗಿ ದಡಸೇರಿದ್ದು, ಅಪಾಯದಿಂದ ಪಾರಾಗಿದ್ದಾರೆ. ಮಕ್ಕಳು ಸಮುದ್ರದಲ್ಲಿ ಅಲೆಗೆ ಸಿಲುಕಿರು ಮಾಹಿತಿ ಲಭಿಸುತ್ತಿದ್ದಂತೆ ಭಾರಿ ಸಂಖ್ಯೆಯಲ್ಲಿ ಜನರು ಒಟ್ಟುಸೇರಿದ್ದು, ಪೊಲೀಸ್, ಅಗ್ನಿಶಾಮಕ ದಳ ಸಿಬ್ಬಂದಿಯೂ ಸ್ಥಳಕ್ಕಾಗಮಿಸಿದ್ದರು.