ಮುಂಬೈ: ಚಲಾವಣೆಯಲ್ಲಿದ್ದ 2,000 ರೂ. ಮುಖಬೆಲೆಯ ನೋಟುಗಳ ಪೈಕಿ ಶೇ 97.26 ರಷ್ಟು ನೋಟುಗಳು ಬ್ಯಾಂಕುಗಳಿಗೆ ಮರಳಿವೆ ಮತ್ತು ಸುಮಾರು 9,760 ಕೋಟಿ ರೂಪಾಯಿ ಮೌಲ್ಯದ ನೋಟುಗಳು ಇನ್ನೂ ಸಾರ್ವಜನಿಕರ ಬಳಿ ಇವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ತಿಳಿಸಿದೆ.
2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಮೇ 19 ರಂದು ಆರ್‌ಬಿಐ ಘೋಷಿಸಿತು.
2023ರ ಮೇ 19ರಂದು 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದಾಗ ಅಂದು ಚಲಾವಣೆಯಲ್ಲಿದ್ದ ಈ ನೋಟುಗಳ ಮೌಲ್ಯವು 3.56 ಲಕ್ಷ ಕೋಟಿ ರೂ.ಗಳಷ್ಟಿತ್ತು. ಇದೀಗ ನವೆಂಬರ್ 30ರಂದು ಚಲಾವಣೆಯಲ್ಲಿದ್ದ ಈ ನೋಟುಗಳ ಮೌಲ್ಯವು 9,760 ಕೋಟಿ ರೂ.ಗೆ ಇಳಿಕೆಯಾಗಿದೆ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಮೇನಲ್ಲಿ ಚಲಾವಣೆಯಲ್ಲಿದ್ದ 2 ಸಾವಿರ ಮುಖಬೆಲೆಯ ಶೇ 97.26 ರಷ್ಟು ನೋಟುಗಳನ್ನು ಸಾರ್ವಜನಿಕರು ಬ್ಯಾಂಕುಗಳಿಗೆ ಹಿಂತಿರುಗಿಸಿದ್ದಾರೆ ಎಂದು ಅದು ಹೇಳಿದೆ.
'2,000 ರೂ. ಮುಖಬೆಲೆಯ ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತವೆ. ಆದರೆ, ಚಲಾವಣೆಯಲ್ಲಿರುವುದಿಲ್ಲ' ಎಂದು ಆರ್‌ಬಿಐ ಹೇಳಿದೆ.
ಜನರು ದೇಶದಾದ್ಯಂತ ಆರ್‌ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿ 2 ಸಾವಿರ ಮುಖಬೆಲೆಯ ನೋಟುಗಳನ್ನು ಬದಲಿಸಿಕೊಳ್ಳಬಹುದು ಅಥವಾ ಠೇವಣಿ ಮಾಡಬಹುದು.
ಇದಲ್ಲದೆ ಜನರು ಅಂಚೆ ಮೂಲಕವೂ ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಗಳಿಗೆ ಕಳುಹಿಸಬಹುದು. ನೋಟು ವಿನಿಮಯಕ್ಕೆ ಸರದಿಯಲ್ಲಿ ನಿಲ್ಲುವುದನ್ನು ತಪ್ಪಿಸಲು ಮತ್ತು ಆರ್‌ಬಿಐನ ಪ್ರಾದೇಶಿಕ ಕಚೇರಿಗಳಿಂದ ದೂರ ಇರುವವರಿಗೆ ಅನಾನುಕೂಲವಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಸದ್ಯಕ್ಕೆ ಆರ್‌ಬಿಐನ ಪ್ರಾದೇಶಿಕ ಕಚೇರಿಗಳಲ್ಲಿ ನೋಟುಗಳನ್ನು ಬದಲಿಸಿಕೊಳ್ಳಲು ಯಾವುದೇ ಗಡುವು ವಿಧಿಸಿಲ್ಲ.
ಈ ಹಿಂದೆ ಚಲಾವಣೆಯಲ್ಲಿರುವ ನೋಟುಗಳನ್ನು ಸೆಪ್ಟಂಬರ್ 30ರೊಳಗೆ ವಿನಿಮಯ ಮಾಡಿಕೊಳ್ಳಲು ಅಥವಾ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಲು ಕೇಳಲಾಗಿತ್ತು. ನಂತರ ಆ ಗಡುವನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಗಿತ್ತು. ಅಕ್ಟೋಬರ್ 7 ರಂದು ಬ್ಯಾಂಕ್ ಶಾಖೆಗಳಲ್ಲಿ 2 ಸಾವಿರ ಮುಖಬೆಲೆಯ ಠೇವಣಿ ಮತ್ತು ವಿನಿಮಯ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು.
ಅಕ್ಟೋಬರ್ 8 ರಿಂದ, ಆರ್‌ಬಿಐನ 19 ಕಚೇರಿಗಳಲ್ಲಿ ನೋಟುಗಳನ್ನು ಬದಲಿಸಿಕೊಳ್ಳುವ ಆಯ್ಕೆಯನ್ನು ಸಾರ್ವಜನಿಕರಿಗೆ ನೀಡಲಾಗಿದೆ. ಈ ಮಧ್ಯೆ, ಆರ್‌ಬಿಐನ ಪ್ರಾದೇಶಿಕ ಕಚೇರಿಗಳಲ್ಲಿ 2,000 ರೂ. ಮುಖಬೆಲೆಯ ನೋಟುಗಳ ವಿನಿಮಯ/ಠೇವಣಿಗಾಗಿ ಜನರು ಸಾಲಿನಲ್ಲಿ ನಿಂತಿರುವುದು ಕಂಡುಬರುತ್ತಿದೆ.
ನವೆಂಬರ್ 2016 ರಲ್ಲಿ ಚಾಲ್ತಿಯಲ್ಲಿದ್ದ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದರಿಂದ ದೇಶದಲ್ಲಿ ಕರೆನ್ಸಿ ಅಗತ್ಯವನ್ನು ಪೂರೈಸಲು 2 ಸಾವಿರ ಮುಖಬೆಲೆಯ ನೋಟುಗಳನ್ನು ಪರಿಚಯಿಸಲಾಯಿತು. ಇತರ ಮುಖಬೆಲೆಯ ನೋಟುಗಳು ಅಗತ್ಯ ಪ್ರಮಾಣದಲ್ಲಿ ಚಲಾವಣೆಯಲ್ಲಿದ್ದು, 2 ಸಾವಿರ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿರುವ ಅಗತ್ಯವಿಲ್ಲ ಎಂದು ಆರ್‌ಬಿಐ ಹೇಳಿದೆ.