ಕಾಸರಗೋಡು: ಕೇರಳದ ಮಹಿಳೆಯರಿಗೆ ತಮ್ಮ ಸಮಸ್ಯೆಗಳು ಮತ್ತು ಸಂಕಷ್ಟಗಳನ್ನು ತೋಡಿಕೊಳ್ಳಲು ಹಾಗೂ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಅವಕಾಶವನ್ನು ಮಹಿಳಾ ಆಯೋಗ ಕಲ್ಪಿಸಿಕೊಟ್ಟಿರುವುದಾಗಿ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ವಕೀಲೆ ಪಿ. ಸತಿದೇವಿ ತಿಳಿಸಿದ್ದಾರೆ.
ಅವರು ಕರಾವಳಿ ಶಿಬಿರದ ಅಂಗವಾಗಿ ಬೇಕಲ ಜಿಎಫ್‍ಎಚ್‍ಎಸ್‍ಎಸ್‍ನಲ್ಲಿ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ಕುರಿತು ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ತಮ್ಮ ಸಮಸ್ಯೆಗಳನ್ನು ಪ್ರಕಟಪಡಿಸಲು ಹಿಂದೇಟುಹಾಕುತ್ತಿದ್ದು, ಕರಾವಳಿ ಶಿಬಿರ, ಪರಿಶಿಷ್ಟ ಪಂಗಡ ಶಿಬಿರ, ಸಾರ್ವಜನಿಕ ವಿಚಾರ ಸಂಕಿರಣ, ರಾಜ್ಯ ವಿಚಾರ ಸಂಕಿರಣ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಲು ಹಾಗೂ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳೆಯರಿಗೆ ಮುಕ್ತವಾಗಿ ಮಾತನಾಡಲು ಮಹಿಳಾ ಆಯೋಗ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.
ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ. ಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಆಯೋಗದ ಸದಸ್ಯೆ ಇಂದಿರಾ ರವೀಂದ್ರನ್, ವಕೀಲೆ ಪಿ. ಕುಞËಯಿಷ, ವಿ.ಆರ್. ಮಹಿಳಾಮಣಿ, ಗ್ರಾಮ ಪಂಚಾಯಿತಿ ಹಿತರಕ್ಷಣಾ ಸ್ಥಾಯಿ ಸಮಿತಿ ಅಧ್ಯಕ್ಷ ಪಿ. ಸುಧಾಕರನ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜೈನಬಾ ಅಬೂಬಕರ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಬೀವಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕಸ್ತೂರಿ ಬಾಲನ್, ಕೆ. ವಿನಯಕುಮಾರ್, ಎನ್. ಶೈನ್ಮೋಲ್, ಎನ್. ಚಂದ್ರನ್ ಮೊದಲಾದವರು ಉಪಸ್ಥಿತರಿದ್ದರು.