ನವದೆಹಲಿ :ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ-ಬಾರ್ಕೋಟ್ ಸುರಂಗವು ಕುಸಿದು, 17 ದಿನಗಳ ಕಾಲ ಅದರಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ರಕ್ಷಿಸಿ ದಿನಗಳೇ ಕಳೆದಿದ್ದು, ದುರಂತಕ್ಕೆ ಕಾರಣವಾದ ಸಂದರ್ಭಗಳ ಕುರಿತು ತನಿಖೆ ನಡೆಯುತ್ತಿದೆ.
2017ರಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಒಡೆತನದ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಎನ್‌ಎಚ್‌ಐಡಿಸಿಎಲ್)ವು ಸುರಂಗ ಯೋಜನೆಯನ್ನು ರೂಪಿಸಿದ್ದಾಗಲೇ ವಿವರವಾದ ಯೋಜನಾ ವರದಿ (ಡಿಪಿಆರ್)ಯನ್ನು ಸಿದ್ಧಗೊಳಿಸಲು ನೇಮಕಗೊಂಡಿದ್ದ ದಿಲ್ಲಿ ಮೂಲದ ಟೆಕ್ನೋಕ್ರಾಟ್ಸ್ ಅಡ್ವೈಸರಿ ಸರ್ವಿಸಸ್ ಪ್ರೈ.ಲಿ.(ಟಿಎಎಸ್‌ಪಿಎಲ್) ಹಲವಾರು ಎಚ್ಚರಿಕೆಗಳನ್ನು ಒಳಗೊಂಡಿದ್ದ ಎರಡು ವರದಿಗಳನ್ನು ಸಲ್ಲಿಸಿತ್ತು.
ಟಿಎಎಸ್‌ಪಿಎಲ್‌ನ ವರದಿಯು ಸುರಂಗ ನಿರ್ಮಾಣಕ್ಕಾಗಿ ಕತ್ತರಿಸಬೇಕಾದ ಬಂಡೆಗಳ ದೃಢತೆ ಮತ್ತು ಸ್ಥಿರತೆಯ ಬಗ್ಗೆ ಅಧ್ಯಯನ ನಡೆಸಿದ್ದು,ಕೇವಲ ಶೇ.20ರಷ್ಟು ಬಂಡೆಗಳು ಉತ್ತಮ ಗುಣಮಟ್ಟದ್ದಾಗಿವೆ ಎಂದು ಹೇಳಿತ್ತು. ಸುರಂಗದ ಎರಡು ಭಾಗಗಳಲ್ಲಿ ಬಂಡೆಗಳ ಜೋಡಣೆಯು 'ಅತ್ಯಂತ ಪ್ರತಿಕೂಲಕರವಾಗಿದೆ 'ಎಂದು ಹೇಳಿದ್ದ ವರದಿಯು,ಉತ್ಖನನದಿಂದಾಗಿ ಒತ್ತಡದ ಮರುಹಂಚಿಕೆಯಿಂದ ಪರಸ್ಪರ ಜೋಡಣೆಗೊಂಡ ಬಂಡೆಗಳು ಬೇರ್ಪಡೆಗೊಳ್ಳಬಹುದು,ತನ್ಮೂಲಕ ಸುರಂಗದ ಮೇಲ್ಛಾವಣಿ ಮತ್ತು ಗೋಡೆಗಳು ಕುಸಿಯಲು ಕಾರಣವಾಗಬಹುದು ಎಂದು ಬೆಟ್ಟು ಮಾಡಿತ್ತು. ಡಿ.6ರಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಕೇಂದ್ರ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿಯವರು,ಕ್ಯಾರಿಯೇಜ್ ವೇ ಮಧ್ಯದಲ್ಲಿ ಪ್ರತ್ಯೇಕ ಗೋಡೆ ಮತ್ತು ತುರ್ತು ಸಂದರ್ಭಗಳಲ್ಲಿ ವಾಹನಗಳು ಮತ್ತು ಪಾದಚಾರಿಗಳು ಪಾರಾಗಲು ಎಸ್ಕೇಪ್ ಟನೆಲ್‌ಗಳ ನಿರ್ಮಾಣಕ್ಕೆ ಅವಕಾಶವನ್ನೊದಗಿಸಲಾಗಿದೆ ಎಂದು ತಿಳಿಸಿದ್ದರು.
ಆದರೆ ಸುರಂಗ ಯೋಜನೆಯು ಇದನ್ನು ಒಳಗೊಂಡಿರಲಿಲ್ಲ. ಎಸ್ಕೇಪ್ ಟನೆಲ್‌ಗಳನ್ನು ಏಕೆ ನಿರ್ಮಿಸಿರಲಿಲ್ಲ ಎಂಬ ಪ್ರಶ್ನೆಗೆ ಹಿರಿಯ ಪ್ರಾಜೆಕ್ಟ್ ಇಂಜಿನಿಯರ್ ಓರ್ವರು,ನಿರ್ಮಾಣ ಹಂತದಲ್ಲಿ ಯೋಜನೆಯ ಪ್ಲಾನ್ ಅನ್ನು ಬದಲಿಸುವ ಪ್ರಾಯೋಗಿಕ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು ಎಂದು ಉತ್ತರಿಸಿದರು. ಎಡಭಾಗದಲ್ಲಿ ಪಾರಾಗುವ ಮಾರ್ಗದ ಬದಲು ಎರಡೂ ಬದಿಗಳಲ್ಲಿ ಏಕ ಮಾರ್ಗ ಸಂಚಾರಕ್ಕಾಗಿ ಮಧ್ಯದಲ್ಲಿ ವಿಭಜಕವನ್ನು ಅಳವಡಿಸಲು ನಿರ್ಧರಿಸಲಾಗಿತ್ತು. ಇದು ಸಂಚಾರಕ್ಕೆ ಹೆಚ್ಚಿನ ಸ್ಥಳಾವಕಾಶವನ್ನು ಕಲ್ಪಿಸಿದೆ ಮತ್ತು ವಾಹನಗಳ ಪರಸ್ಪರ ಡಿಕ್ಕಿಯ ಅಪಾಯವನ್ನು ನಿವಾರಿಸಿದೆ ಎಂದು ಅವರು ವಿವರಿಸಿದರು.
ಉತ್ಖನನದ ಸಮಯದಲ್ಲಿ ಮುನ್ನೆಚ್ಚರಿಕೆಗಳನ್ನು ಅನುಸರಿಸಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಹೊಣೆಗಾರಿಕೆಯನ್ನು ಹೈದರಾಬಾದ್ ಮೂಲದ ನವಯುಗ ಇಂಜಿನಿಯರಿಂಗ್ ಮತ್ತು ಅದರ ಜರ್ಮನ್ ಸಲಹೆಗಾರ ಬೆರ್ನಾರ್ಡ್ ಗ್ರೂಪ್ ವಹಿಸಿಕೊಂಡಿದ್ದವು.
ತೀರ ಇತ್ತೀಚಿಗೆ,ಅಂದರೆ ಸುರಂಗವು ಭಾಗಶಃ ಕುಸಿಯುವ ಮೂರು ತಿಂಗಳುಗಳ ಹಿಂದಷ್ಟೇ ಬೆರ್ನಾರ್ಡ್ ಗ್ರೂಪ್ ಕೂಡ ಎಚ್ಚರಿಕೆಗಳನ್ನು ನೀಡಿತ್ತು. ಸುರಂಗ ಕಾಮಗಾರಿಯ ಆರಂಭದಿಂದಲೂ ಭೌಗೋಳಿಕ ಸ್ಥಿತಿಗಳು ಟೆಂಡರ್ ದಾಖಲೆಗಳಲ್ಲಿ ಊಹಿಸಿದ್ದಕ್ಕಿಂತ ಹೆಚ್ಚು ಸವಾಲಿನದಾಗಿವೆ ಎನ್ನುವುದನ್ನು ಸೂಚಿಸುತ್ತಿವೆ ಎಂದು ಅದು ತಿಳಿಸಿತ್ತು. ಈ ಸವಾಲಿನ ಸ್ಥಿತಿಗಳೇ ಸುರಂಗ ಕುಸಿತಕ್ಕೆ ಕಾರಣವಾಗಿದ್ದವೇ ಎಂಬ ಪ್ರಶ್ನೆಗೆ ಬೆರ್ನಾರ್ಡ್ ಗ್ರೂಪ್‌ನ ಭಾರತೀಯ ಕಾರ್ಯಾಚರಣೆಗಳ ಪ್ರಬಂಧಕರು ಉತ್ತರಿಸಲು ನಿರಾಕರಿಸಿದ್ದಾರೆ.