ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಎಂದು ಜಾಗತಿಕ ರೇಟಿಂಗ್ ಸಂಸ್ಥೆ ಫಿಚ್ ಮಂಗಳವಾರ ತಿಳಿಸಿದೆ. ಆದಾಗ್ಯೂ, ಮುಂದಿನ ಸಂಸತ್ತಿನಲ್ಲಿ ಬಹುಮತದ ಸಂಖ್ಯೆಯು ಆಡಳಿತ ಸುಧಾರಣಾ ಕಾರ್ಯಸೂಚಿಯ ಮಹತ್ವಾಕಾಂಕ್ಷೆಯ ಮೇಲೆ ಪ್ರಭಾವ ಬೀರಬಹುದು ಎಂದು ಅದು ಹೇಳಿದೆ.
ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಭಾರತದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ. ಅದೇ ರೀತಿಯಲ್ಲಿ ಬಾಂಗ್ಲಾದೇಶದಲ್ಲಿ ಆಡಳಿತಾರೂಢ ಪಕ್ಷಕ್ಕೆ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಬಹುದು. ಇದು ವಿಶಾಲ ನೀತಿಯ ನಿರಂತರತೆಯ ಸಾಧ್ಯತೆಯನ್ನು ಸೂಚಿಸುತ್ತದೆ ಎಂದು ಫಿಚ್ ಹೇಳಿಕೆಯಲ್ಲಿ ತಿಳಿಸಿದೆ.
2014 ರಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, 2019 ರ ಸಾರ್ವತ್ರಿಕ ಚುನಾವಣೆಯಲ್ಲೂ ಭಾರಿ ಬಹುಮತದೊಂದಿಗೆ ಮರಳಿತು. 2024 ರ ಸಾರ್ವತ್ರಿಕ ಚುನಾವಣೆಗಳು ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿದ್ದು, ಆಗಲೂ ಮೋದಿ ಸರ್ಕಾರ ಮೂರನೇ ಬಾರಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಫಿಚ್ ನಿರೀಕ್ಷಿಸಿದೆ.