ನವದೆಹಲಿ: ಜಿಎಸ್‌ಟಿ ಅಧಿಕಾರಿಗಳು 21,791 ನಕಲಿ ಜಿಎಸ್‌ಟಿ ನೋಂದಣಿಗಳನ್ನು ಪತ್ತೆ ಮಾಡಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಸಭೆಗೆ ತಿಳಿಸಿದ್ದಾರೆ. ಎರಡು ತಿಂಗಳು ನಡೆದ ವಿಶೇಷ ಅಭಿಯಾನದ ಅವಧಿಯಲ್ಲಿ ₹24 ಸಾವಿರಕ್ಕೂ ಹೆಚ್ಚಿನ ತೆರಿಗೆ ವಂಚನೆಯನ್ನು ಪತ್ತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಕಲಿ ಜಿಎಸ್‌ಟಿ ನೋಂದಣಿಗಳನ್ನು ಪತ್ತೆ ಮಾಡಲು ಪರೋಕ್ಷ ತೆರಿಗೆಗಳ ಕೇಂದ್ರೀಯ ಮಂಡಳಿಯ (ಸಿಬಿಐಸಿ) ಅಧಿಕಾರಿಗಳು ವಿಶೇಷ ಅಭಿಯಾನವನ್ನು ಮೇ 16ರಿಂದ ಜುಲೈ 15ರವರೆಗೆ ನಡೆಸಿದ್ದಾರೆ.
ಇ-ವಾಣಿಜ್ಯ ಸಂಸ್ಥೆಗಳಿಗೆ ಜಿಎಸ್‌ಟಿ ನೋಂದಣಿಗೆ ಸರಳೀಕೃತ ಪ್ರಕ್ರಿಯೆಯೊಂದನ್ನು ಈಗಾಗಲೇ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ ಎಂದು ನಿರ್ಮಲಾ ಅವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದ್ದಾರೆ. ಇದರ ಅಡಿಯಲ್ಲಿ, ಇ-ವಾಣಿಜ್ಯ ಸಂಸ್ಥೆಗಳು ನೋಂದಣಿಗೆ ಅರ್ಜಿ ಸಲ್ಲಿಸಿದಾಗ, ಅರ್ಜಿ ಸಲ್ಲಿಕೆಯಾದ ರಾಜ್ಯದಲ್ಲಿ ಆ ಸಂಸ್ಥೆಯು ಭೌತಿಕವಾಗಿ ಅಸ್ತಿತ್ವ ಹೊಂದಿಲ್ಲದಿದ್ದರೆ, ತನ್ನ ಭೌತಿಕ ಅಸ್ತಿತ್ವ ಇರುವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ವಿಳಾಸ ನೀಡಲು ಅವಕಾಶ ಕಲ್ಪಿಸಲಾಗಿದೆ.