ಅಯೋಧ್ಯೆ: 'ರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಬೇಕೆಂಬುದು ಎಲ್ಲರ ಬಯಕೆಯಾಗಿದೆ. ಆದರೆ ಎಲ್ಲರಿಗೂ ಜನವರಿ 22ರಂದು ಅಯೋಧ್ಯೆಗೆ ಬರಲು ಸಾಧ್ಯವಿಲ್ಲ. ಮನೆಯಲ್ಲಿಯೇ ದೀಪ ಬೆಳಗುವುದರ ಮೂಲಕ ಶ್ರೀರಾಮನನ್ನು ಪ್ರಾರ್ಥಿಸಿ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಮನವಿ ಮಾಡಿದ್ದಾರೆ.
ವಿವಿಧ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದ ನಂತರ ಸಾರ್ವಜನಿಕ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, 'ಆಹ್ವಾನಿತರು ಮಾತ್ರ ಆ ದಿನದ ಕಾರ್ಯಕ್ರಮಕ್ಕೆ ಬರಬೇಕು' ಎಂದು ಹೇಳಿದರು
'ಭದ್ರತಾ ದೃಷ್ಟಿಯಿಂದ 22ರಂದು ಅಯೋಧ್ಯೆಗೆ ತಲುಪುವುದು ಕಷ್ಟಕರವಾಗಿದೆ. ದೇಶದ ಜನತೆಗೆ ಅದರಲ್ಲೂ ಉತ್ತರ ಪ್ರದೇಶದ ಜನತೆಗೆ ಆ ದಿನದಂದು ಅಯೋಧ್ಯೆಗೆ ಬರಬೇಡಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಜನವರಿ 23ರ ನಂತರ ಯಾವಾಗ ಬೇಕಾದರೂ ಭೇಟಿ ನೀಡಿ ಶ್ರೀರಾಮನ ದರ್ಶನ ಪಡೆಯಿರಿ' ಎಂದರು.
'ಆ ದಿನ ಶ್ರೀರಾಮ ಅಯೋಧ್ಯೆಗೆ ಬರುತ್ತಾನೆ. ಶ್ರೀರಾಮನ ಭಕ್ತರಾದ ನಾವು ಶ್ರೀರಾಮನಿಗೆ ತೊಂದರೆಯಾಗುವಂತಹ ಯಾವ ಕೆಲಸವನ್ನು ಮಾಡಬಾರದು. ರಾಮ ಮಂದಿರ ನಿರ್ಮಾಣಕ್ಕೆ 550 ವರ್ಷ ಕಾದಿದ್ದೇವೆ. ಅವನ ದರ್ಶನಕ್ಕಾಗಿ ಇನ್ನೂ ಸ್ವಲ್ಪ ಸಮಯ ಕಾಯಬೇಕಿದೆ' ಎಂದು ಹೇಳಿದರು.
'ಆ ದಿನ ಅಯೋಧ್ಯೆಗೆ ಬರಲಾಗದೆ ಇರುವವರು ಬೇಸರಿಸುವ ಅಗತ್ಯವಿಲ್ಲ. ತಮ್ಮ ಮನೆಯಲ್ಲಿ ಶ್ರೀರಾಮನನ್ನು ಪ್ರಾರ್ಥಿಸಿ. ಶ್ರೀರಾಮ ಜ್ಯೋತಿ ಬೆಳಗಿಸುವ ಮೂಲಕ ದೀಪಾವಳಿಯನ್ನು ಆಚರಿಸಿ' ಎಂದರು.