ಇಸ್ಲಾಮಾಬಾದ್: ಪಾಕಿಸ್ತಾನದ ವಾಯವ್ಯ ಭಾಗದಲ್ಲಿ ಇಂದು (ಮಂಗಳವಾರ) ಸಂಭವಿಸಿದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ 24 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಗಾನಿಸ್ತಾನದ ಗಡಿಯಲ್ಲಿರುವ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಘಟನೆ ನಡೆದಿದೆ ಎಂದು ಭದ್ರತಾ ಅಧಿಕಾರಿಗಳು ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಇಸ್ಲಾಮಿ ಉಗ್ರಗಾಮಿಗಳು ಪೊಲೀಸ್ ಠಾಣೆಗೆ ಸ್ಫೋಟಕ ತುಂಬಿದ ಟ್ರಕ್ ಅನ್ನು ಡಿಕ್ಕಿ ಹೊಡೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ದಾಳಿಯಲ್ಲಿ ಅನೇಕರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ರಕ್ಷಣಾ ಇಲಾಖೆ ಅಧಿಕಾರಿ ಐಜಾಜ್ ಮೆಹಮೂದ್ ಹೇಳಿದ್ದಾರೆ.
ಪಾಕ್ ಆಂತರಿಕ ಸಚಿವ ಸರ್ಫ್ರಾಜ್ ಬುಗ್ತಿ ಅವರು ದಾಳಿಯನ್ನು ಖಂಡಿಸಿದ್ದಾರೆ. ಜತೆಗೆ, ಮೃತರ ಕುಟುಂಬಸ್ಥರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಪಾಕ್‌ನಲ್ಲಿ ಹೊಸದಾಗಿ ತಲೆ ಎತ್ತಿರುವ, ತೆಹ್ರೀಕ್-ಇ- ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸಂಘಟನೆಯ ಜತೆ ಗುರುತಿಸಿಕೊಂಡಿರುವ ತೆಹ್ರೀಕ್-ಇ-ಜಿಹಾದ್ ಪಾಕಿಸ್ತಾನ್ (ಟಿಜೆಪಿ) ದಾಳಿಯ ಹೊಣೆ ಹೊತ್ತುಕೊಂಡಿದೆ. ಜತೆಗೆ, ಪಾಕ್ ಸೇನೆಯನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ.