ಪತ್ತನಂತಿಟ್ಟ; ಅಯ್ಯಪ್ಪಸ್ವಾಮಿಗೆ ಅಲಂಕರಿಸಲಿರುವ ಪವಿತ್ರ ವಸ್ತ್ರಾಭರಣ ಹೊತ್ತ ಮೆರವಣಿಗೆ ನಾಳೆ(ಮಂಗಳವಾರ) ಶಬರಿಮಲೆ ತಲುಪಲಿದೆ. ಡಿಸೆಂಬರ್ 23 ರಂದು ಆರನ್ಮುಳ ಪಾರ್ಥಸಾರಥಿ ದೇವಸ್ಥಾನದಿಂದ ಹೊರಟ ಮೆರವಣಿಗೆ ನಾಳೆ ಮಧ್ಯಾಹ್ನ ಪಂಬಾ ತಲುಪಲಿದೆ.
ಸಂಜೆ 5.15ಕ್ಕೆ ಸರಂಕುತ್ತಿಗೆ ಆಗಮಿಸುವ ಮೆರವಣಿಗೆಯನ್ನು ದೇವಸ್ವಂ ಮಂಡಳಿ ಅಧ್ಯಕ್ಷರ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಗುವುದು. ದೇವಸ್ವಂ ಮಂಡಳಿ ಅಧ್ಯಕ್ಷರು ಮತ್ತಿತರರ ನೇತೃತ್ವದಲ್ಲಿ ಕೋಡಿಮರ ಸನಿಹ ವಸ್ತ್ರಾಭರಣವನ್ನು ಬರಮಾಡಿಕೊಂಡು ಸೋಪಾನಕ್ಕೆ ಕೊಂಡೊಯ್ಯಲಾಗುವುದು. ಸೋಪಾನಂನಲ್ಲಿ ತಂತ್ರಿ ಮತ್ತು ಮೇಲ್ಶಾಂತಿ ಗರ್ಭಗೃಹಕ್ಕೆ ಕೊಂಡೊಯ್ಯುವರು.
ನಂತರ 6.35ಕ್ಕೆ ಪವಿತ್ರ ವಸ್ತ್ರಾಭರಣವನ್ನು ಅಯ್ಯಪ್ಪ ಸ್ವಾಮಿಗೆ ತೊಡಿಸಲಾಗುವುದು. ಬಳಿಕ ತಂತ್ರಿವರ್ಯರು ಭಕ್ತರಿಗೆ ಪ್ರಸಾದ ವಿತರಿಸುವರು. ಮಂಗಳವಾರ ಮಧ್ಯಾಹ್ನದ ಪೂಜೆಯ ನಂತರ ಗರ್ಭಗೃಹ ಮುಚ್ಚಿ, ಸಂಜೆ 5 ಗಂಟೆಗೆ ಮತ್ತೆ ತೆರೆಯಲಾಗುವುದು. ಸಾಮಾನ್ಯ ದಿನಗಳಲ್ಲಿ ಗರ್ಭಗೃಹ ಮಧ್ಯಾಹ್ನ ಮೂರು ಗಂಟೆಗೆ ತೆರೆಯಲಾಗುತ್ತದೆ.
ಬುಧವಾರ ಶಬರಿಮಲೆಯಲ್ಲಿ ಮಂಡಲ ಪೂಜೆ ನಡೆಯಲಿದೆ. ಬೆಳಗ್ಗೆ 10.30ರಿಂದ 11.30ರ ಒಳಗೆ ಮಂಡಲ ಪೂಜೆ ನಡೆಯಲಿದೆ. ಮಂಡಲ ಪೂಜೆಗೆ ಸಂಬಂಧಿಸಿದಂತೆ ತುಪ್ಪದ ಅಭಿಷೇಕದ ಸಮಯವನ್ನು ಕಡಿಮೆ ಮಾಡಲಾಗಿದೆ. ಅಂದು ವರ್ಚುವಲ್ ಕ್ಯೂ ಬುಕ್ಕಿಂಗ್ 70 ಸಾವಿರಕ್ಕೆ ನಿಗದಿಯಾಗಿದೆ ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ತಿಳಿಸಿದ್ದಾರೆ.
27ರಂದು ಮಂಡಲ ಪೂಜೆ ಬಳಿಕ ಶಬರಿಮಲೆ ಗರ್ಭಗೃಹ ಮುಚ್ಚಲಾಗುವುದು. ಬಳಿಕ ಡಿಸೆಂಬರ್ 30 ರಂದು ಮಕರ ಬೆಳಕು ಉತ್ಸವಕ್ಕಾಗಿ ಮತ್ತೆ ತೆರೆಯಲಾಗುತ್ತದೆ. ಮಕರ ಬೆಳಕು ಉತ್ಸವ ನಡೆಯುವಾಗ ಸ್ಪಾಟ್ ಬುಕ್ಕಿಂಗ್ ಅನ್ನು 15000 ಕ್ಕೆ ಹೆಚ್ಚಿಸಬೇಕೇ ಎಂಬ ಬಗ್ಗೆ ಸರ್ಕಾರದೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ದೇವಸ್ವಂ ಮಂಡಳಿ ತಿಳಿಸಿದೆ.